ಮಡಿಕೇರಿ, ಮಾ. 14: ಜಿಲ್ಲೆಯ ಅತ್ಯಂತ ಎತ್ತರದ ತಡಿಯಂಡಮೋಳು ಬೆಟ್ಟ ಶ್ರೇಣಿಯಲ್ಲಿ ನಿನ್ನೆಯಿಂದ ಕಾಡ್ಗಿಚ್ಚು ಕಾಣಿಸಿಕೊಂಡಿರುವ ಬೆನ್ನಲ್ಲೇ, ಇಂದು ಸೂರ್ಲಬ್ಬಿ- ಮುಟ್ಲು ಗ್ರಾಮಗಳ ನಡುವಿನ ತಿರ್‍ಕೆಮೊಟ್ಟೆ - ಅಯ್ಯಪ್ಪಗುತ್ತಿ ಬೆಟ್ಟ ಸಾಲಿನಲ್ಲಿ ಬೆಂಕಿ ಕಾಣಿಸಿಕೊಂಡು ಸಾಕಷ್ಟು ಕಾಡು ದಹಿಸಲ್ಪಟ್ಟಿವೆ. ವಿಷಯ ತಿಳಿದು ಸೋಮವಾರಪೇಟೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ ಯಾದರೂ, ನೀರಿನ ಟ್ಯಾಂಕರ್ ತೆರಳಲು ಮಾರ್ಗವಿಲ್ಲದೆ ಹಿಂತಿರುಗಿದೆ.

ಇನ್ನು ಅಲ್ಲಿನ ಗ್ರಾಮಸ್ಥರು ತಮ್ಮ ತಮ್ಮ ಜಾಗಕ್ಕೆ ಕಾಡ್ಗಿಚ್ಚು ಹರಡದಂತೆ ಪ್ರಯತ್ನ ನಡೆಸಿದ್ದು, ಸಂಜೆ ಬಹುಹೊತ್ತಿನ ತನಕ ನಿಯಂತ್ರಣಕ್ಕೆ ಬಾರದೆ ಆತಂಕದಲ್ಲಿದ್ದರು. ಸೂರ್ಲಬ್ಬಿ - ಮುಟ್ಲು ಬಳಿಯ ಚೆಳ್‍ಪೆಕೊಲ್ಲಿ, ಅಯ್ಯಪ್ಪಗುತ್ತಿ, ತಿರ್‍ಕೆಮೊಟ್ಟೆ ಸರಹದ್ದಿನಲ್ಲಿ ಹತ್ತಾರು ಎಕರೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ ಎಂದು ಸೂರ್ಲಬ್ಬಿ ನಾಡಿನ ಅಧ್ಯಕ್ಷ ಎಂ.ಎಸ್. ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಕಾಡ್ಗಿಚ್ಚು ನಿಖರವಾಗಿ ಎಲ್ಲಿಂದ ಹಬ್ಬಿತು ಎಂದು ಬೆಟ್ಟ ಸಾಲಿನ ನಡುವೆ ಇನ್ನು ಗಮನಿಸಲು ಸಾಧ್ಯವಾಗಿಲ್ಲ ವೆಂದು ಅವರು ‘ಶಕ್ತಿ’ಗೆ ಖಚಿತಪಡಿಸಿದ್ದಾರೆ.