ಮಡಿಕೇರಿ, ಮಾ. 14: ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಅಕ್ರಮ ಮದ್ಯ ಸಾಗಾಟ ಶೇಖರಣೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಇಲಾಖೆ ಧಾಳಿಯನ್ನು ಚುರುಕುಗೊಳಿಸಿದೆ.
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ವ್ಯಾಪ್ತಿಯಲ್ಲಿ ಧಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡು ಓರ್ವನನ್ನು ಬಂದಿಸಲಾಗಿದೆ. ಶನಿವಾರಸಂತೆ ಪಟ್ಟಣದಲ್ಲಿರುವ ಬಾರೊಂದರಲ್ಲಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ವಿಚಕ್ಷಣದಳ ನಿರೀಕ್ಷಕ ಚಂದ್ರಶೇಖರ್ ಹಾಗೂ ತಂಡದವರು ರೂ. 3,06,000 ಮೊತ್ತದ 465 ಲೀ. ಮದ್ಯ ಹಾಗೂ 156.65 ಲೀ. ಬೀಯರ್ ವಶಪಡಿಸಿಕೊಂಡಿದ್ದಾರೆ. ನಿಯಮಾನುಸಾರ ಮದ್ಯದ ಬಾಕ್ಸ್‍ಗಳನ್ನು ಸ್ಟಾಕ್ ರೂಂನಲ್ಲಿ ಇರಿಸಿಕೊಳ್ಳಬೇಕಾಗಿದ್ದು, ಬಾರ್‍ನವರು ಬೇರೆ ಕಡೆಗಳಲ್ಲಿ ಇರಿಸಿಕೊಂಡಿದ್ದ ಕಾರಣಕ್ಕಾಗಿ ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಶನಿವಾರಸಂತೆಯ ಅನಧಿಕೃತ ರೆಸ್ಟೋರೆಂಟ್ ಒಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 6.930 ಲೀ. ಮದ್ಯ ಹಾಗೂ 6.560 ಲೀ. ಬೀಯರ್ ವಶಪಡಿಸಿಕೊಂಡಿದ್ದು, ಈ ಸಂಬಂಧ ವ್ಯಕ್ತಿಯೋರ್ವನನ್ನು ಬಂದಿಸಿ ನ್ಯಾಯಾಂಗ ವಶಕ್ಕೊಳಪಡಿಸಲಾಗಿದೆ.