ಸೋಮವಾರಪೇಟೆ, ಮಾ. 14: ಇಲಿಗಳಿಗೆ ಇಡಲಾಗಿದ್ದ ಕ್ರಿಮಿನಾಶಕ ಮಿಶ್ರಿತ ಹಾಲಿನ ಪುಡಿಯನ್ನು ಸೇವಿಸಿ ಇಬ್ಬರು ಪುಟಾಣಿ ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ದೊಡ್ಡತೋಳೂರು ಅಂಗನವಾಡಿಯಲ್ಲಿ ಸಂಭವಿಸಿದ್ದು, ಮಕ್ಕಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ದೊಡ್ಡತೋಳೂರು ಅಂಗನವಾಡಿಯಲ್ಲಿ ಬೀಡುಬಿಟ್ಟಿರುವ ಇಲಿಗಳಿಗೆ ಮುಕ್ತಿ ನೀಡಲೆಂದು ಸಂಜೆಯ ವೇಳೆ ಹಾಲಿನ ಪುಡಿಯಲ್ಲಿ ಕ್ರಿಮಿನಾಶಕ ಬೆರೆಸಿ ಗೋಡೆಯ ಬದಿಯಲ್ಲಿ ಹಾಕಲಾಗಿದ್ದು, ಮಾರನೇ ದಿನ ಅಂಗನವಾಡಿಗೆ ಆಗಮಿಸಿದ ಮಕ್ಕಳು ಆಟವಾಡುತ್ತಾ ಕ್ರಿಮಿನಾಶಕ ಮಿಶ್ರಿತ ಹಾಲಿನಪುಡಿಯನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ.

ತಕ್ಷಣ ಈರ್ವರು ಮಕ್ಕಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅಂಗನವಾಡಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.