ವೀರಾಜಪೇಟೆ, ಮಾ. 14: ಮೀನುಪೇಟೆಯ ನಿವಾಸಿ ಪಿ.ಸಿ.ವಿಕ್ರಂ ಎಂಬವರ ಲೈನ್‍ಮನೆಯಲ್ಲಿದ್ದ ಜೇನುಕುರುಬರ ರಾಜು ಎಂಬಾತನಿಗೆ ಎರವರ ಮುತ್ತ (45)ಎಂಬಾತನು ಗುದ್ದಲಿಯಿಂದ ತಲೆಗೆ ಹೊಡೆದು ಗಂಭೀರ ಸ್ವರೂಪದ ಗಾಯಗೊಳಿಸಿ ಕೊಲೆಯತ್ನದ ಆರೋಪದ ಮೇರೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು 5ವರ್ಷಗಳ ಸಜೆ ಹಾಗೂ ರೂ 30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ ತಾ.16-05-2018ರಂದು ಅಪರಾಹ್ನ 4 ಗಂಟೆ ಸಮಯದಲ್ಲಿ ಮನೆಯ ಮಾಲೀಕ ಪಿ.ಸಿ.ವಿಕ್ರಂ ಅವರ ಮನೆಯ ಮುಂದಿನ ಹೂತೋಟದಲ್ಲಿ ರಾಜು ಎಂಬಾತ ಕೆಲಸ ಮಾಡಿಕೊಂಡಿದ್ದಾಗ ಅಲ್ಲಿಗೆ ಬಂದ ಮುತ್ತ ಅನಾವಶ್ಯಕವಾಗಿ ಜಗಳ ತೆಗೆದು ಗುದ್ದಲಿಯಿಂದ ತಲೆಯ ಎಡ ಭಾಗಕ್ಕೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆ ನಗರ ಪೊಲೀಸರು ಮುತ್ತನನ್ನು ಬಂಧಿಸಿ ಪ್ರಕರಣವನ್ನು ದಾಖಲಿಸುವದರೊಂದಿಗೆ ಸಬ್ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ತೀರ್ಪಿನಲ್ಲಿ ರೂ.30,000 ದಂಡದಲ್ಲಿ ರೂ 20,000 ವನ್ನು ಪರಿಹಾರ ರೂಪದಲ್ಲಿ ಗಾಯಾಳು ರಾಜುವಿಗೆ ನೀಡಬೇಕು. ದಂಡ ಪಾವತಿಸದಿದ್ದಲ್ಲಿ ಇನ್ನು ಒಂದು ವರ್ಷ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.