ಸಿದ್ದಾಪುರ, ಮಾ. 14: ಸಮೀಪದ ಅವರೆಗುಂದ ಹಾಡಿಯಲ್ಲಿ ಅರಣ್ಯ ಹಕ್ಕು ಗ್ರಾಮ ಸಮಿತಿ ಸಭೆ ಹಾಡಿಯ ಸಮುದಾಯ ಭವನದಲ್ಲಿ ನಡೆಯಿತು

ಅಧ್ಯಕ್ಷ ಎಂ.ಸಿ. ವಾಸು ಮಾತನಾಡಿ, ಆದಿವಾಸಿಗಳು ಅರಣ್ಯದಲ್ಲಿ ವಾಸವಾಗಿದ್ದು ಇಂದಿಗೂ ಅಭಿವೃದ್ಧಿ ಕಾಣದೆ ಕಂಗಾಲಾಗಿದ್ದಾರೆ 2006ರಲ್ಲಿ ಅರಣ್ಯ ಮಸೂದೆ ಕಾಯ್ದೆ ಜಾರಿಯಾದರೂ ಇಂದಿಗೂ ಮೂಲಸೌಕರ್ಯ ಸಿಗದೆ ವಂಚಿತ ರಾಗಿದ್ದಾರೆ. ಹಾಡಿಯ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು

ಅವರೆಗುಂದ ಹಾಡಿಯಲ್ಲಿ ಒಟ್ಟು 82 ಕುಟುಂಬಗಳು ವಾಸವಾಗಿದ್ದು ಇದರಲ್ಲಿ 26 ಮಂದಿಗೆ ಮಾತ್ರ ಹಕ್ಕುಪತ್ರ ಸಿಕ್ಕಿದೆ ಉಳಿದವರಿಗೆ ಕೊಟ್ಟಿಲ್ಲ. ಅರಣ್ಯ ಹಕ್ಕು ಸಮಿತಿಯ ಮೂಲಕ ಅಗತ್ಯ ದಾಖಲಾತಿ ನೀಡಿದರು ಹಕ್ಕು ಪತ್ರ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಕೂಡಲೇ ಹಕ್ಕು ಪತ್ರ ನೀಡಬೇಕೆಂದರು. ಅವರೆಗುಂದ ಗ್ರಾಮದಿಂದ ಸಿದ್ದಾಪುರಕ್ಕೆ ತೆರಳಬೇಕಾದರೆ ನೂರಕ್ಕೂ ಹೆಚ್ಚು ಹಣ ಖರ್ಚು ಮಾಡಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ರಸ್ತೆ ಡಾಮರೀಕರಣ ಕಾಣದೆ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾವದೇ ಬಸ್ಸುಗಳ ಓಡಾಟ ಇಲ್ಲದೆ ಖಾಸಗಿ ವಾಹನಗಳಲ್ಲಿ ಸಂಚರಿಸಬೇಕು. ದಿನನಿತ್ಯ ನೂರಾರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರೆಗುಂದ ಹಾಡಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿದ್ದು, ಗ್ರಾಮ ಪಂಚಾಯಿತಿ ಕೂಡಲೇ ಬಗೆ ಹರಿಸಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರಾಯ್ ಡೇವಿಡ್, ಅರಣ್ಯಾಧಿಕಾರಿ ಮಂಜುನಾಥ್ ಗೂಳಿ, ಬಸವನಹಳ್ಳಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಮಾದ, ಹಣ್ಣಿನ ತೋಟ ಹಾಡಿಯ ಅರಣ್ಯಹಕ್ಕು ಸಮಿತಿ ಅಧ್ಯಕ್ಷ ರಾಜ್ಯ ಅರಣ್ಯ ರಕ್ಷಕ ಮಣಿಕಂಠ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸುಶೀಲ, ಸರೋಜಾ ಸೇರಿದಂತೆ ಅರಣ್ಯ ಹಕ್ಕು ಸಮಿತಿಯ ಪ್ರಮುಖರು ಹಾಗೂ ಹಾಡಿಯ ನಿವಾಸಿಗಳು ಹಾಜರಿದ್ದರು.