ಮಡಿಕೇರಿ, ಮಾ. 12: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಮಾದಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯು ತಾ. 10 ರಂದು ಅರ್ಚಕ ಪರಮೇಶ್ ಭಟ್ ಹಾಗೂ ಅನಂತ ಭಟ್ ನೇತೃತ್ವದಲ್ಲಿ ನೆರವೇರಿತು. ನೂರಾರು ಮಾತೆಯರ ಸಹಿತ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಜರುಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ವಹಿಸಿ, ಮಾತನಾಡುತ್ತಾ, ಶ್ರೀ ಕ್ಷೇತ್ರದಿಂದ ಇಂದು ಸಮಾಜದಲ್ಲಿ ಎಲ್ಲರೂ ಸ್ವಾಬಲಂಭನೆಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ನುಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೈ. ಪ್ರಕಾಶ್, ಶ್ರೀ ಕ್ಷೇತ್ರದ ಜನಪರ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು. ನಿವೃತ್ತ ಸೈನಿಕ ಕೆ.ಜಿ. ರಾಮನಾಥ, ವರ್ತಕ ವಿ.ಡಿ. ಪುಂಡರೀಕಾಕ್ಷ, ಮಾದಪಟ್ಟಣ ಪ್ರಗತಿ ಗುಂಪುಗಳ ಒಕ್ಕೂಟ ಅಧ್ಯಕ್ಷೆ ಲಕ್ಷ್ಮೀ ಅವರುಗಳು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ನುಡಿಯಾಡಿದರು. ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಶ್ರೀ ಸತ್ಯನಾರಾಯಣ ಪೂಜೆ ಬಗ್ಗೆ ಉಪನ್ಯಾಸ ನೀಡಿದರು. ಮೇಲ್ವಿಚಾರಕ ಹರೀಶ್ ನಿರೂಪಿ ಸಿದರು. ಸಮಿತಿ ವತಿಯಿಂದ ಪೂಜೆ, ಪ್ರಸಾದ ಬಳಿಕ ಅನ್ನಸಂತರ್ಪಣೆ ನೆರವೇರಿತು.