ಮಡಿಕೇರಿ, ಮಾ. 12: ನಗರದ ಜಿಲ್ಲಾಸ್ಪತ್ರೆಯ ಡಿ. ಗ್ರೂಪ್ ವಸತಿ ಗೃಹದ ಎದುರು ನಿಲ್ಲಿಸಲಾಗಿದ್ದ ಬೈಕ್‍ವೊಂದಕ್ಕೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಹೆರವನಾಡು ಗ್ರಾಮದ ಉಡೋತ್‍ಮೊಟ್ಟೆ ನಿವಾಸಿ ಬಿ.ಎಸ್. ವೆಂಕಟೇಶ್ ಎಂಬವರಿಗೆ ಸೇರಿದ ರೋಯಲ್ ಎನ್‍ಫೀಲ್ಡ್ ಬೈಕ್ (ಕೆ.ಎ.12 ಕ್ಯೂ-8997) ಬೆಂಕಿಗೆ ಆಹುತಿಯಾಗಿ, ಭಾಗಶಃ ಸುಟ್ಟು ಕರಕಲಾಗಿದೆ.

ವೆಂಕಟೇಶ್ ಜಿಲ್ಲಾಸ್ಪತ್ರೆಯ ಸರ್ಕಾರಿ ಆ್ಯಂಬ್ಯುಲೆನ್ಸ್ ವಾಹನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಮವಾರ ಸಂಜೆ ಕಾರ್ಯನಿರತ ಮೈಸೂರಿಗೆ ತೆರಳಿದ್ದರು, ರಾತ್ರಿ 11ರ ಹೊತ್ತಿಗೆ ಬೆಂಕಿಗೆ ಬೈಕ್ ಸುಟ್ಟು ಹೋಗಿರುವದು ವೆಂಕಟೇಶ್‍ಗೆ ಗೋಚರಿಸಿದೆ, ಕೃತ್ಯಕ್ಕೆ ಕಾರಣ ತಿಳಿದಿಲ್ಲ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.