ಕುಶಾಲನಗರ, ಮಾ. 12: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನೊಬ್ಬ ಸಂಚಾರಿ ಪೊಲೀಸರಿಗೆ ಹೆದರಿ ಅತಿ ವೇಗದಲ್ಲಿ ವಾಹನ ಚಲಾಯಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ವಾಹನಗಳಿಗೆ ಡಿಕ್ಕಿಪಡಿಸಿ ಆಸ್ಪತ್ರೆ ಸೇರಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಆವರ್ತಿಯ ಸೂರ್ಯ ಎಂಬ ಯುವಕ ತನ್ನ ಕೆಟಿಎಂ ಬೈಕ್‍ನಲ್ಲಿ ಕೊಪ್ಪ ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಸಂದರ್ಭ ಮಡಿಕೇರಿಯ ಇಂಟರ್‍ಸೆಪ್ಟರ್ ವಾಹನದ ಸಿಬ್ಬಂದಿಗಳು ನಿಲ್ಲಿಸಲು ಸೂಚಿಸಿದರೂ ಸ್ಪಂದಿಸದೆ ಅತಿ ವೇಗವಾಗಿ ಬೈಕ್ ಚಾಲಿಸಿದ ಸಂದರ್ಭ ಈ ಘಟನೆ ನಡೆದಿದೆ. ಯುವಕ ಹೆಲ್ಮೆಟ್ ಧರಿಸದೆ ವಾಹನ ಚಾಲಿಸುತ್ತಿದ್ದ ಎನ್ನಲಾಗಿದ್ದು ರಸ್ತ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸ್ಥಳೀಯ ಜಯರಾಜ್ ಎಂಬವರ ಕಾರಿಗೆ ಅಪ್ಪಳಿಸಿ ಯುವಕನ ಕೈ ಮತ್ತು ಕಾಲಿಗೆ ತೀವ್ರ ಪೆಟ್ಟು ಉಂಟಾಗಿದೆ. ಇದೇ ಸಂದರ್ಭ ರಸ್ತೆ ಬದಿಯಲ್ಲಿದ್ದ ಇನ್ನೊಂದು ಕಾರು ಹಾಗೂ ಬೈಕ್‍ಗೆ ಡಿಕ್ಕಿಯಾಗಿ ಹಾನಿ ಉಂಟಾಗಿದೆ.

ಸ್ಥಳಕ್ಕೆ ಕುಶಾಲನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಕ್ರಮಕೈಗೊಂಡಿದ್ದಾರೆ.