ಶಕ್ತಿ ವರದಿಗೆ ಸ್ಪಂದನ

ವೀರಾಜಪೇಟೆ, ಮಾ. 13: ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವಂತೆ ಪಾದಚಾರಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯಿಂದ ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಸಮಸ್ಯೆಯನ್ನು ಅರಿತ ‘ಶಕ್ತಿ’ ಕಸದ ಸಮಸ್ಯೆಯನ್ನು ವರದಿ ಮಾಡಿತ್ತು. ವರದಿಗೆ ಪಂಚಾಯಿತಿಯು ಸ್ಪಂದಿಸಿ ಕಸ ಮುಕ್ತಗೊಳಿಸಿದೆ.

ವೀರಾಜಪೇಟೆ ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವಂತೆ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ತೆರಳುವ ಪಾದಚಾರಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯಾಗಿ ಹಲವು ತಿಂಗಳು ಕಳೆದರು ಕಸಕ್ಕೆ ಮುಕ್ತಿ ಲಭಿಸಿರಲಿಲ್ಲ. ಅಲ್ಲಿನ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರೂ ಫಲಕಾರಿಯಾಗಿರುವದಿಲ್ಲ. ಜನಪ್ರತಿನಿಧಿಯು ಗಮನ ಹರಿಸಲಿಲ್ಲ. ಇದನ್ನು ಮನಗಂಡ ಪತ್ರಿಕೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ತಾ. 3 ರಂದು ಕಸದ ರಾಶಿಗೆ ಮುಕ್ತಿ ಕಲ್ಪಿಸದ ಪಂಚಾಯಿತಿ ಎಂದು ವರದಿ ಮಾಡಿತ್ತು.

ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಸ್ಥಳದಲ್ಲಿದ್ದ ಕಸವನ್ನು ತೆರವುಗೊಳಿಸಿ ಬೀದಿ ದೀಪ ಕೂಡ ಅಳವಡಿಸಿದೆ.