ಬಿ.ಎನ್. ಪ್ರಥ್ಯು ಆರೋಪ

ಪೊನ್ನಂಪೇಟೆ, ಮಾ. 12: ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ.ಎಸ್.ಎನ್.ಎಲ್.) ಇದೀಗ ಜನರಿಂದ ದೂರವಾಗತೊಡಗಿದೆ. ಒಂದು ಕಾಲದಲ್ಲಿ ಕೊಡಗಿನ ಜನತೆಗೆ ಉತ್ತಮ ಸೇವೆ ಒದಗಿಸಿದ್ದ ಈ ಇಲಾಖೆ, ಇಂದು ಪ್ರತಿದಿನ ಜನತೆಯಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದೆ. ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಇದೀಗ ಬಿ.ಎಸ್.ಎನ್.ಎಲ್. ಸಂಪೂರ್ಣ ವಿಫಲವಾಗಿದ್ದು, ಆದರೂ ಇಲಾಖೆ ಕಣ್ಣು ಮುಚ್ಚಿ ಕುಳಿತಂತಿದೆ ಎಂದು ಆಪಾದಿಸಿರುವ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು, ಕೊಡಗಿನಲ್ಲಿ ಬಿ.ಎಸ್.ಎನ್.ಎಲ್.ನ ಅದಃಪತನಕ್ಕೆ ಇಲಾಖೆಯ ಉನ್ನತಾಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣವಾಗಿದ್ದು, ಕೆಲ ಅಧಿಕಾರಿಗಳು ಆಮಿಷಕ್ಕೊಳಗಾಗಿ ಇತರ ಖಾಸಗಿ ಮೊಬೈಲ್ ಕಂಪೆನಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಎನ್.ಎಲ್.ನ ಮೊಬೈಲ್ ಸೇವೆ ದಕ್ಷಿಣ ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿಗೆ ಇದುವರೆಗೂ ಬಿ.ಎಸ್.ಎನ್.ಎಲ್. ತಲಪಿರಲಿಲ್ಲ. ಈ ಬಗ್ಗೆ ಇಲಾಖೆಯ ಗಮನ ಸೆಳೆದಿದ್ದರೂ ಅವರಿಂದ ಯಾವದೇ ಸ್ಪಂದನ ದೊರೆಯುತ್ತಿಲ್ಲ. ಇಲಾಖೆಯ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಬಿ.ಎಸ್.ಎನ್.ಎಲ್. ಮೊಬೈಲ್ ಸೇವೆ ಸಂಪೂರ್ಣವಾಗಿ ನೆಲಕಚ್ಚುವ ಕಾಲ ಬಹಳ ದೂರವೇನಿಲ್ಲ ಎಂದು ಅಸಮಾದಾನ ಹೊರಹಾಕಿದ ಬಿ.ಎನ್. ಪ್ರಥ್ಯು ಅವರು, ಈಗಿರುವ ಆಧುನಿಕ ತಂತ್ರಜ್ಞಾನದಿಂದಾಗಿ ದೇಶದ ಮೊಬೈಲ್ ಸೇವೆಯಲ್ಲಿ ನಂ.1 ಆಗಿರಬೇಕಿದ್ದ ಸರಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಸಂಸ್ಥೆ ಈ ಮಟ್ಟಕ್ಕೆ ತಲಪಿರುವದು ದುರಂತವೇ ಸರಿ ಎಂದು ಆತಂಕ ವ್ಯಕ್ತಪಡಿಸಿದರು.

ದಕ್ಷಿಣ ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಇದೀಗ ಬಿ.ಎಸ್.ಎನ್.ಎಲ್. ಮೊಬೈಲ್ ಸೇವೆ ದೊರೆಯುತ್ತಿಲ್ಲ. ಹಲವಾರು ಮೊಬೈಲ್ ಟವರ್‍ಗಳು ನಿಷ್ಕ್ರೀಯಗೊಂಡಿದೆ. ಬಿ.ಎಸ್.ಎನ್.ಎಲ್. ಮೊಬೈಲ್ ಇಂಟರ್‍ನೆಟ್ ಸೇವೆಯ ದುಸ್ಥಿತಿಯಂತೂ ಹೇಳತೀರದು. ಕಣ್ಣಮುಂದೆ ನಿಂತ ವ್ಯಕ್ತಿಗಳಿಗೆ ಕರೆ ಮಾಡಿದರೂ ‘ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಎಂಬ ಉತ್ತರ ಬರುತ್ತಿದೆ. ಅಲ್ಲದೆ ನಿರಂತರವಾದ ಪ್ರಯತ್ನಗಳ ಮೂಲಕ ಅಪರೂಪಕ್ಕೊಮ್ಮೆ ಮೊಬೈಲ್ ಸಂಪರ್ಕ ಸಾದಿಸಿದರೂ ಮಾತನಾಡುತ್ತಿರುವಾಗಲೇ ಸಂಪರ್ಕ ಕಡಿತಗೊಂಡು ಹಿಂಸೆ ಅನುಭವಿಸುವಂತಾಗಿದೆ. ಈ ಬಗ್ಗೆ ವಿಚಾರಿಸಿದರೆ ಟವರ್‍ಗಳ ಸಾಮಥ್ರ್ಯ ಮೀರಿ ಮೊಬೈಲ್ ಸಂಪರ್ಕವಿದೆ ಎಂದು ಜವಾಬು ನೀಡುತ್ತಾರೆ.

ಆದರೆ ಅದರ ಸಾಮಥ್ರ್ಯವನ್ನು ಹೆಚ್ಚಿಸುವ ಬಗ್ಗೆ ಇವರು ಇದುವರೆಗೂ ತಲೆಕೆಡಿಸಿಕೊಂಡಿಲ್ಲ ಎಂದು ಸಮಸ್ಯೆಗಳ ಪಟ್ಟಿ ಬಿಚ್ಚಿಟ್ಟ ಬಿ.ಎನ್. ಪ್ರಥ್ಯು ಅವರು, ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಹಿಂದೆ ಇದ್ದ ಬಿ.ಎಸ್.ಎನ್.ಎಲ್. ಸ್ಥಿರ ದೂರವಾಣಿ ಜನರಿಂದ ಬಹುದೂರವಾದಂತೆ ಬಿ.ಎಸ್.ಎನ್.ಎಲ್. ಮೊಬೈಲ್ ಸೇವೆ ಕೂಡ ಜನರಿಂದ ದೂರವಾಗುವದರಲ್ಲಿ ಯಾವದೇ ಸಂದೇಹವಿಲ್ಲ ಎಂದು ಹೇಳಿದರು.

ಜನರ ಬೇಡಿಕೆಗಳಿಗೆ ಸ್ಪಂದನ ದೊರಕುತ್ತಿಲ್ಲ. ಜನರು ದೂರುಗಳನ್ನು ತೆಗೆದುಕೊಂಡು ಹೋದರೆ ಅದನ್ನು ಸ್ವೀಕರಿಸಲು ಸಂಬಂಧಿಸಿದ ಅಧಿಕಾರಿಗಳೇ ಕಚೇರಿಯಲ್ಲಿರುವದಿಲ್ಲ. ಇಲಾಖೆಯ ಬಹುತೇಕ ಸಿಬ್ಬಂದಿಗಳು ಒಂದೇ ಸ್ಥಳದಲ್ಲಿ ಕಳೆದ 10 ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಇವರ ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣ. ಸಿಬ್ಬಂದಿ ಮತ್ತು ಕೆಳ ಅಧಿಕಾರಿಗಳ ಕಥೆ ಈ ರೀತಿಯಾದರೆ, ಇಲಾಖೆಯ ಉನ್ನತಾಧಿಕಾರಿಗಳು ಇತರ ಖಾಸಗಿ ಕಂಪನಿಗಳೊಂದಿಗೆ ರಹಸ್ಯವಾದ ಒಳಒಪ್ಪಂದ ಮಾಡಿಕೊಂಡು ಬಿ.ಎಸ್.ಎನ್.ಎಲ್.ಎಂಬ ಜನೋಪಯೋಗಿ ಸಾರ್ವಜನಿಕ ಸಂಸ್ಥೆಯನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅವರು ದೂರಿದರು.

ಎಲ್ಲಾ ಬಿ.ಎಸ್.ಎನ್.ಎಲ್. ಮೊಬೆÉೈಲ್ ಟವರ್‍ಗಳ ಸಾಮಥ್ರ್ಯ ಹೆಚ್ಚಿಸಿ ಶೀಘ್ರದಲ್ಲೆ ಜನತೆಗೆ ಉತ್ತಮ ಸೇವೆ ಒದಗಿಸಬೇಕು. ‘ಕಾಲ್‍ಡ್ರಾಪ್’ ಅನ್ನು ತಡೆಗಟ್ಟಲು ಇಲಾಖೆ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರಲ್ಲದೆ, ಅದಕ್ಕಿಂತಲು ಮೊದಲು ಇಲಾಖೆಯ ಆದಾಯದ ಮೂಲವಾಗಿರುವ ಗ್ರಾಹಕರೊಂದಿಗೆ ಕಚೇರಿಯಲ್ಲಿ ಸೌಜನ್ಯದಿಂದ ವರ್ತಿಸುವ ಬಗ್ಗೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ವಿಶೇಷವಾದ ಕಾರ್ಯಾಗಾರವನ್ನು ಹಮ್ಮಿಕೊಳ್ಳುವಂತೆ ಬಿ.ಎನ್. ಪ್ರಥ್ಯು ಅವರು ಇಲಾಖೆಗೆ ಸಲಹೆ ನೀಡಿದ್ದಾರೆ.