ಮಡಿಕೇರಿ, ಮಾ. 12: ಯುವಕನೋರ್ವನನ್ನು ಮಾರಕಾಸ್ತ್ರ ಬಳಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ರಾತ್ರಿ ವೇಳೆ ಸಂಭವಿಸಿದೆ. ಮಡಿಕೇರಿಯ ಸ್ಟೋನ್‍ಹಿಲ್ ಬಳಿ ಈ ಘಟನೆ ಸಂಭವಿಸಿದ್ದು, ಪುಟಾಣಿನಗರ ನಿವಾಸಿಯೆನ್ನಲಾದ ಪೈಂಟಿಂಗ್ ಕೆಲಸ ಮಾಡಿಕೊಂಡಿರುವ ಶರತ್ (26) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿರುವದಾಗಿ ತಿಳಿದುಬಂದಿದ್ದು, ಗಂಭೀರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‍ನನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಕಾರದೊಂದಿಗೆ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಶರತ್ ಆಸ್ಪತ್ರೆಯಲ್ಲಿ ಸುಜಿತ್, ಕೀರ್ತನ್, ಹರ್ಷ ಹಾಗೂ ಪುನಿತ್ ಎಂಬವರುಗಳು ತನ್ನನ್ನು ಆಟೋರಿಕ್ಷಾದಲ್ಲಿ ಕರೆದೊಯ್ದು ಹಲ್ಲೆ ನಡೆಸಿರುವದಾಗಿ ಪೊಲೀಸರಿಗೆ ನೀಡಿರುವ ಹೇಳಿಕೆ ಆಧಾರದಲ್ಲಿ ಮೊಕದ್ದಮೆ ದಾಖಲಾಗಿದೆ. ಹಳೆ ವೈಷಮ್ಯ ಘಟನೆಗೆ ಕಾರಣವೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ.-ಟಿ.ಜಿ. ಸತೀಶ್, ಚಿತ್ರ : ಲಕ್ಷ್ಮೀಶ್.