ಮಡಿಕೇರಿ, ಮಾ. 12 : ಕಳೆದ ಒಂದು ಶತಮಾನದಿಂದ ಮಡಿಕೇರಿಯ ಬಹುಪಾಲು ಜನತೆಗೆ ಶುದ್ಧ ಕುಡಿಯುವ ನೀರನ್ನು ಕಲ್ಪಿಸುತ್ತಿರುವ ಪ್ರಕೃತಿ ರಮಣೀಯ ಪರಿಸರ ತಾಣಕ್ಕೆ ಸಂಚಕಾರ ಎದುರಾಗಿರುವ ಅಂಶ ಬೆಳಕಿಗೆ ಬಂದಿದೆ.ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಜನತೆಗೆ ನೈಸರ್ಗಿಕವಾಗಿ ಹರಿದು ಬರುತ್ತಿರುವ ನೀರನ್ನು ಉಣಿಸುವದರೊಂದಿಗೆ, ಮಂಜಿನ ನಗರಿಯತ್ತ ಆಗಮಿಸುವ ಜನತೆಯನ್ನು ಆಹ್ವಾನಿಸುವ ಖ್ಯಾತಿಯ ‘ಸ್ವಾಗತ ಬೆಟ್ಟ’ ಸಾಲಿನಲ್ಲಿ ಈ ಬೆಳವಣಿಗೆ ಕಂಡು ಬಂದಿದೆ.ಮಡಿಕೇರಿ ನಗರಸಭೆಯ ಸರಹದ್ದಿನ ಈ ಸ್ವಾಗತ ಬೆಟ್ಟ ಸಾಲು ಪ್ರದೇಶ ಸರ್ವ ನಂ. 101/1 ‘ಎ’ಯಲ್ಲಿ ಮತ್ತೊಂದೆಡೆ 14 ಎಕರೆ ಸರಕಾರಿ ಜಮೀನು ವನಸಿರಿಯಿಂದ ಕಂಗೊಳಿಸುವ ಮಾತ್ರದಿಂದಲೇ ಸ್ವಾಗತ ಬೆಟ್ಟವೆಂದು ಕರೆಸಿಕೊಂಡಿದ್ದಾಗಿದೆ. ಶತಮಾನದ ಇತಿಹಾಸ : ಮಡಿಕೇರಿಯ ಐತಿಹಾಸಿಕ ಕರಗ ಉತ್ಸವಕ್ಕೆ ಚಾಲನೆ ನೀಡುವ ಪಂಪಿನ ಕೆರೆ ಸ್ಥಳದಿಂದ (ಮೊದಲ ಪುಟದಿಂದ) ಅನತಿ ದೂರ, ಕಾನನದ ನಡುವೆ ಸುಂದರವಾದ ನೀರು ಶೇಖರಣೆಯ ವಿಶಾಲ ಕೆರೆ ಅದಾಗಿದೆ. ಈ ಕೆರೆಯನ್ನು 1895ರಲ್ಲಿ ಅಂದಿನ ಕೊಡಗು ಸಹಾಯಕ ಆಯುಕ್ತರಾಗಿದ್ದ ರಾವ್ ಬಹುದ್ದೂರ್ ಚೆಪ್ಪುಡೀರ ಸೋಮಯ್ಯ ಎಂಬವರು, ತಮ್ಮ ತಂದೆ ರಾವ್ ಬಹುದ್ದೂರ್ ಚೆಪ್ಪುಡೀರ ಸುಬ್ಬಯ್ಯ ಜ್ಞಾಪಕಾರ್ಥವಾಗಿ ಅಭಿವೃದ್ಧಿಗೊಳಿಸಿ, ತಮ್ಮ ತಂದೆಯ ನೆನಪಿನಲ್ಲಿ ಮಡಿಕೇರಿ ಜನತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು.ದಶಕಗಳ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಎಂ. ನಾಣಯ್ಯ ಕೂಡ, ಈ ಜಲಮೂಲ ಸೇರಿದಂತೆ ಸ್ವಾಗತ ಬೆಟ್ಟ ಸಾಲು ಪ್ರದೇಶ ಅತಿಕ್ರಮಣಗೊಳಿಸದಂತೆ ಶಾಶ್ವತ ಬೇಲಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಕಂಡು ಬಂದಿದೆ.

ಆದರೆ ನಗರಸಭೆ ಜಲಮೂಲದ ಅನಿವಾರ್ಯತೆ ಮರೆತು ಒಟ್ಟಾರೆ ಜಾಗವನ್ನು ಅರಣ್ಯ ಇಲಾಖೆಗೆ ಬಿಟ್ಟು ಕೊಟ್ಟಿರುವ ಮಾತು ಕೇಳಿಬರುತ್ತಿದೆ.

ಈ ಬೆಳವಣಿಗೆ ನಡುವೆಯೇ ಇಡೀ ಸ್ವಾಗತ ಬೆಟ್ಟದ ನಾಲ್ಕು ನಿಟ್ಟಿನಲ್ಲಿ ಆಧುನಿಕ ಯಂತ್ರಗಳ ಬಳಕೆಯೊಂದಿಗೆ ಅರಣ್ಯ ಇಲಾಖೆಯ ಮಂದಿ ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ಈ ಯೋಜನೆಗೆ ಅಂದಾಜು ರೂ. 1.5 ಕೋಟಿ ಹಣವನ್ನು ‘ಸಾಲು ಮರ ತಿಮ್ಮಕ್ಕ’ ಹೆಸರಿನಲ್ಲಿ ಬಳಸಲಾಗಿದೆ ಎಂಬ ಆರೋಪವಿದೆ.

ಬೆಟ್ಟ ಸಾಲಿನ ಕಾಡು ನಾಶಗೊಳಿಸಿ ಜಲಮೂಲಕ್ಕೆ ಧಕ್ಕೆಯೊಂದಿಗೆ ರಸ್ತೆ ನಿರ್ಮಾಣ, ಪ್ರವಾಸಿ ವಿಶ್ರಾಂತ ಕಟ್ಟಡ, ಆಟದ ಮೈದಾನ, ಇನ್ನಿತರ ಅಟಿಕೆ ಸಾಮಗ್ರಿ ಅಳವಡಿಸಿರುವದು ಕಂಡು ಬಂದಿದೆ. ಉಕ್ಕುಡ ರಸ್ತೆಯ ಅಂಬೇಡ್ಕರ್ ಸಮುದಾಯ ಭವನ ಎದುರು ಸ್ವಾಗತ ಕಮಾನು, ದ್ವಾರ ಇತ್ಯಾದಿ ಕಲ್ಪಿಸಲಾಗಿದೆ.

ಪ್ರಮುಖರ ಪ್ರತಿಕ್ರಿಯೆ: ಈ ಬಗ್ಗೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಸಹಿತ ಅನೇಕ ಸದಸ್ಯರು, ಆ ಜಾಗ ನಗರಸಭೆಗೆ ಸೇರಿಲ್ಲವೆಂದೂ, ಕಾಮಗಾರಿಗೂ ತಮಗೂ ಸಂಬಂಧವಿಲ್ಲವೆಂದೂ ಉತ್ತರ ನೀಡಿದ್ದಾರೆ.

ಅಧಿಕಾರಿ ಹೇಳಿಕೆ: ಈ ಬಗ್ಗೆ ಮಡಿಕೇರಿ ಉಪವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಬಳಿ ಅಭಿಪ್ರಾಯ ಬಯಸಿದಾಗ, ನಿಖರವಾಗಿ ಯೋಜನೆ ಹಣ ಎಷ್ಟೆಂದು ಗೊತ್ತಿಲ್ಲ, ಬದಲಾಗಿ ಅಲ್ಪ ಸ್ವಲ್ಪ ಹಣದಿಂದ ಪ್ರವಾಸಿಗರ ಅನುಕೂಲಕ್ಕಾಗಿ ಕಾರ್ಯ ಯೋಜನೆ ಕೈಗೊಂಡಿದ್ದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತನಿಖೆಗೆ ಆಗ್ರಹ: ಪುರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಡಿಕೇರಿ ನಗರಸಭೆಗೆ ಸಂಬಂಧಿಸಿದ ಜಾಗ ಇದಾಗಿದ್ದು, ಶತಮಾನದಿಂದ ಬಹುಪಾಲು ಜನತೆಗೆ ಕುಡಿಯುವ ನೀರು ಒದಗಿಸುತ್ತಿರುವ ಜಲಮೂಲ ಅದೆಂದು ಬೊಟ್ಟು ಮಾಡಿದ್ದಾರೆ. ರಾಜೀವ್ ಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಚಾಲಕ ತೆನ್ನಿರ ಮೈನಾ ಕೂಡ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಡಿಕೇರಿ ಜನತೆಯ ಕುಡಿಯುವ ನೀರಿನ ಮೂಲಕ್ಕೆ ಸಂಚಕಾರ ತಂದಿರುವ ಯೋಜನೆ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

- ಶ್ರೀಸುತ