ಮಡಿಕೇರಿ, ಮಾ. 13: ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ರಾಣಿಗೇಟ್ ಗ್ರಾಮಸ್ಥರಿಗೆ ಇತ್ತೀಚೆಗೆ ದಂತ ಆರೋಗ್ಯದ ಅರಿವು ಮತ್ತು ತಪಾಸಣಾ ಶಿಬಿರ ವೀರಾಜಪೇಟೆ ಕೊಡಗು ದಂತ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ನಡೆಯಿತು.

ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ದಂತ ಆರೋಗ್ಯ ಮತ್ತು ದಂತ ಶುಚಿತ್ವದ ಬಗ್ಗೆ ಮಾಹಿತಿ ನೀಡಲಾಯಿತು. ಒಟ್ಟು 120 ಕ್ಕೂ ಹೆಚ್ಚು ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.

ರಾಜ್ಯ ಸೋಲಿಗ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಶಾಂತರಾಜು, ಚಿಕ್ಕ ಅಳುವಾರ ಕನ್ನಡ ವಿಭಾಗ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಶ್ರೀನಿವಾಸ್ ಮಾತನಾಡಿದರು.

ಮತ್ತೋರ್ವ ಅತಿಥಿಯಾದ ರಾಣಿಗೇಟ್ ಆಶ್ರಮ ಶಾಲೆಯ ಶಿಕ್ಷಕ ರವಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುಮ್ತಾಜ್ ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಯಾವ ರೀತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬೇಕು ಹಾಗೂ ತೊಂದರೆಯಾದಾಗ ಯಾರಿಗೆ ಹೇಳಿಕೊಳ್ಳಬೇಕು ಮತ್ತು ಮಕ್ಕಳ ಸಹಾಯವಾಣಿಯ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರಾದ ಕೇಶವಮೂರ್ತಿ ಅವರು ಸಮಾಜ ಕಾರ್ಯ ವಿಭಾಗದಲ್ಲಿ ಗ್ರಾಮೀಣ ಅದ್ಯಯನ ಶಿಬಿರ ಯಾವ ರೀತಿಯ ಪಾತ್ರವನ್ನು ವಹಿಸಿದೆ ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು.

ಏಳು ದಿನಗಳ ಕಾಲ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದಂತಹ ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿಯಾದ ಕುಮಾರ ವಿಷ್ಣು ಗ್ರಾಮೀಣ ಅಧ್ಯಯನ ಶಿಬಿರದ ಅನಿಸಿಕೆಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಹರಿಣಾಕ್ಷಿ, ಲೋಕೇಶ್ ಭರಣಿ ಮತ್ತು ಕೆ.ಜೆ. ರಾಬಿನ್ ಭಾಗವಹಿಸಿದ್ದರು. ಸಮಾಜಕಾರ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಾಮೀಣ ಅದ್ಯಯನ ಶಿಬಿರದ ವರದಿ ವಚನವನ್ನು ಶಾಲಿನಿ ಹೇಳಿದರು.

ಸವಿತ ಪ್ರಾರ್ಥಿಸಿದರೆ, ಚಾಂದಿನಿ ಸ್ವಾಗತಿಸಿದರು. ಸಮಾಜ ಕಾರ್ಯ ವಿಭಾಗ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ನಟರಾಜ್ ವಂದಿಸಿದರು. ಗ್ರಾಮೀಣ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಶ್ವೇತ ನಿರೂಪಿಸಿದರು.