ವೀರಾಜಪೇಟೆ, ಮಾ. 13: ದೇಶದಲ್ಲಿ ಕಾನೂನಿಗೆ ಸಂವಿಧಾನವೇ ಶ್ರೇಷ್ಠ ನಾವುಗಳು ಸಂವಿಧಾನದ ಆಶಯಕ್ಕೆ ಪೂರಕವಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ, ಕೆವಿಜಿ ಕಾನೂನು ಕಾಲೇಜು ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ 'ಮಾದರಿ ನ್ಯಾಯಾಲಯ ಕಾರ್ಯಕ್ರಮ'ವನ್ನು ಉದ್ಘಾಟಿಸಿದ ನ್ಯಾಯಾಧೀಶ ಜಯಪ್ರಕಾಶ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಕಾನೂನಿನ ಅರಿವು ಇದ್ದಲ್ಲಿ ನಮ್ಮನ್ನು ನಾವು ರಕ್ಷಿಸಿ ಕೊಳ್ಳಬಹುದು. ಪ್ರತಿಯೊಬ್ಬರಿಗೂ ಕಾನೂನಿನ ಅವಶ್ಯಕತೆ ಇದೆ. ಕಾನೂನು ಎಂಬ ಒಂದೇ ಪದ್ಧತಿ ಯನ್ನು ಪದೆ ಪದೆ ಅನುಸರಿಸಿದಾಗ ಅದು ಮುಂದುವರಿದು ಕಾನೂನು ಆಗುತ್ತದೆ. ನಿಯಮವನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಕಾನೂನು ಉಲ್ಲಂಘನೆಯಾಗಲಿದ್ದು ಅದಕ್ಕೆ ಶಿಕ್ಷೆ ಕೊಡಬಹುದು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕಾನೂನಿನ ಅರಿವು ಪಡೆದುಕೊಳ್ಳುವದು ಮುಂದಿನ ಭವಿಷ್ಯಕ್ಕೆ ಉತ್ತಮವಾಗಲಿದೆ. ನ್ಯಾಯವಾದಿಗಳು ಕಾನೂನಿನ ದೃಷ್ಟಿಯಲ್ಲಿ ಕಕ್ಷಿದಾರರಿಗೆ ನ್ಯಾಯದೊರಕಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಲಕ್ಷ್ಮಿ ಸಭೆಯನ್ನುದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸು ವಂತರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ದುಷ್ಚಟಗಳನ್ನು ದೂರಮಾಡಿ ಶಿಕ್ಷಣದಲ್ಲಿ ಗುರಿಯನ್ನು ಮುಟ್ಟಿ ಸಾಧನೆ ಮಾಡುವಂತಾಗ ಬೇಕು ಎಂದು ಹೇಳಿದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ, ಟಿ.ಕೆ. ಬೋಪಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕಾನೂನಿನ ಮಹತ್ವವನ್ನು ತಿಳಿದು ಕೊಳ್ಳುವಂತಾಗಬೇಕು ಎಂದರು. ವೇದಿಕೆಯಲ್ಲಿ ವಕೀಲ ಎಂ.ಎಂ. ಪೂವಣ್ಣ, ಸುಳ್ಯದ ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ, ಪ್ರೊ. ವೈ.ಜಯರಾಂ, ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಚ್.ಬಿ. ವೇಣುಗೋಪಲ್, ಪ್ರೊ. ಎಂ.ಬಿ. ದಿವ್ಯ ಇತರರು ಉಪಸ್ಥಿತರಿದ್ದರು. ನಂತರ ಮಾದರಿ ನ್ಯಾಯಾಲಯದ ಅಣುಕು ಕಾರ್ಯಕ್ರಮ ನಡೆಯಿತು.