ಮಡಿಕೇರಿ, ಮಾ. 13: ದಕ್ಷಿಣ ಕೊಡಗಿನ ಗಡಿಭಾಗವಾಗಿರುವ ಕುಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ವಿರೋಧಿಸಿ ಇಂದು ಸಾರ್ವಜನಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯಲ್ಲಿನ ಸಮಸ್ಯೆಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯ ದಿಂದಾಗಿ ಕಳೆದ 6 ತಿಂಗಳಿನಲ್ಲಿ 7 ಜನರು ಮೃತಪಟ್ಟಿದ್ದಾರೆ. ಇದೊಂದು ಆತಂಕಕಾರಿ ಸನ್ನಿವೇಶವಾಗಿದೆ ಹಾಗೂ ಈ ಬಗ್ಗೆ ಸಂಬಂಧಿಸಿದವರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಗಳು ಪ್ರತಿಭಟನಾನಿರತರೊಂದಿಗೆ ಚರ್ಚಿಸಿದರು. ಚುನಾವಣೆ ಮುಗಿಯುವ ತನಕ ವಾರಕ್ಕೆ ಮೂರು ದಿನ ಒಬ್ಬರು ಮಹಿಳಾ ವೈದ್ಯಾಧಿಕಾರಿ ಹಾಗೂ ಇನ್ನಿಬ್ಬರು ಪುರುಷ ವೈದ್ಯರನ್ನು ನಿಯೋಜಿಸುವದಾಗಿ ತಿಳಿಸಿದ ಅವರು, ಚುನಾವಣೆಯ ಬಳಿಕ ಶಾಶ್ವತವಾಗಿ ಮೂವರು ವೈದ್ಯರನ್ನು ನೇಮಿಸುವದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ಕುಟ್ಟ, ಬಾಡಗ ಹಾಗೂ ನಾಲ್ಕೇರಿ ಗ್ರಾಮದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಬಾಡಗ ಗ್ರಾ.ಪಂ. ಸದಸ್ಯ ಪೆಮ್ಮಣಮಾಡ ನವೀನ್, ಬೊಳ್ಳೆರ ವಿನಯ್ ಕುಟ್ಟಪ್ಪ, ಚೋಡುಮಾಡ ದಿನೇಶ್, ದೇಯಂಡ ಜಯರಾಮ್, ಮುಕ್ಕಾಟಿರ ಶಿವು ಮಾದಪ್ಪ ಮತ್ತಿತರರು ಪಾಲ್ಗೊಂಡಿದ್ದರು.