ಗೋಣಿಕೊಪ್ಪ ವರದಿ, ಮಾ. 11 : ಬೆಸಗೂರು ಗ್ರಾಮದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಹಸು ಹಾಗೂ ಕರುವಿನ ಹುಲಿ ದಾಳಿ ಮಾಡಿ ಗಾಯಗೊಳಿಸಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಮೂಡಿಸಿದೆ. ನಿರಂತರವಾಗಿ 2 ದಿನ ದಾಳಿ ನಡೆಸಿರುವ ಹುಲಿ ಗ್ರಾಮವನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಅಲ್ಲಿನ ನಟೇಶ್ ಎಂಬವರಿಗೆ ಸೇರಿದ ಹಸುವಿನ ಮೇಲೆ ಕಳೆದ ರಾತ್ರಿ ದಾಳಿ ನಡೆಸಿದೆ. ಕೊಟ್ಟಿಗೆ ಸಮೀಪ ಕಟ್ಟಿದ್ದ ಸಂದರ್ಭ ಮೇಲೆರಗಿದ್ದು, ಜನರು ಕೂಗಿಕೊಂಡ ಕಾರಣ ಬಿಟ್ಟು ಓಡಿ ಹೋಗಿದೆ. ಹಸುವಿನ ಮೈಯಲ್ಲಿ ಪರಚಿದ ಗುರುತುಗಳಿವೆ.
ಪುಚ್ಚಿಮಾಡ ರಮೇಶ್ ಎಂಬವರಿಗೆ ಸೇರಿದ ಕರುವಿನ ಮೆಲೆ ಸೋಮವಾರ ಬೆಳಗ್ಗೆ ಗದ್ದೆಯಲ್ಲಿ ದಾಳಿ ಮಾಡಿದೆ. ಕರುವಿನ ಕತ್ತಿನ ಭಾಗಕ್ಕೆ ಗಾಯವಾಗಿದ್ದು, ಸಾವಿನಿಂದ ಪಾರಾಗಿದೆ. ಪಶುವೈದ್ಯರು ಚಿಕಿತ್ಸೆ ನೀಡಿದ್ದು, ಎರಡು ಜಾನುವಾರುಗಳು ಸಾವಿನಿಂದ ಪಾರಾಗಿವೆ. ಸ್ಥಳಕ್ಕೆ ಪೊನ್ನಂಪೇಟೆ ಆರ್‍ಎಫ್‍ಒ ಗಂಗಾಧರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಸ್ಥರಿಗೆ ಪ್ರತ್ಯಕ್ಷ : ಭಾನುವಾರ ಸಂಜೆ ಗ್ರಾಮಸ್ಥರು ಮನೆಗೆ ತೆರಳುತ್ತಿದ್ದ ಸಂದರ್ಭ ಅಲ್ಲಿನ ಮಹದೇಶ್ವರ ದೇವಸ್ಥಾನ ಕಾಡಿನಿಂದ ಹುಲಿ ರಸ್ತೆ ಮೂಲಕ ಹಾದು ಹೋಗುವ ಮೂಲಕ ಭಯ ಮೂಡಿಸಿತ್ತು. ಅದೇ ರಾತ್ರಿ ನಟೇಶ್ ಎಂಬುವವರ ಕೊಟ್ಟಿಗೆಗೆ ದಾಳಿ ನಡೆಸಿದೆ. ಎರಡು ದಿನ ನಿರಂತರ ದಾಳಿ ನಡೆಸಿರುವದರಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. - ಸುದ್ದಿಪುತ್ರ