ಒಡೆಯನಪುರ,ಮಾ. 11: ಪತ್ರಿಕೆ-ಮಾಧ್ಯಮಗಳು ಸಮಾಜ ಹಾಗೂ ಸಾರ್ವಜನಿಕರ ಒಡನಾಡಿಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತ ರೈ ಅಭಿಪ್ರಾಯ ಪಟ್ಟರು. ಅವರು ಶನಿವಾರಸಂತೆ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಕಟ್ಟಡದ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯ ಮತ್ತು ಕೆಟ್ಟ ವಿದ್ಯಾಮಾನಗಳನ್ನು ಪ್ರಚಾರಗೊಳಿಸುವಂತಹ ಕಾರ್ಯ ನಿರ್ವಹಿಸುತ್ತಿವೆ, ಸಾರ್ವಜನಿಕವಾಗಿ ಒಡನಾಡಿಯಾಗಿ ರುವ ಪತ್ರಕರ್ತರಿಗೆ ಸಾರ್ವಜನಿಕರ, ಜನಪ್ರತಿನಿಧಿಗಳ ಸಹಕಾರದ ಅಗತ್ಯ ಇರುತ್ತದೆ, ಕಾರ್ಯನಿರತ ಪತ್ರಕರ್ತರ ಸಂಘಗಳ ಕಚೇರಿಗೆ ಸ್ವಂತ ಕಟ್ಟಡದ ಅಗತ್ಯ ಇರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಜನಪ್ರತಿನಿಧಿಗಳು ರಾಜಕಿಯ ರಹಿತವಾಗಿ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ನೆರವು ನೀಡುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಸಂಘ-ಸಂಸ್ಥೆಗಳಲ್ಲಿ ಒಗ್ಗಟ್ಟು ಸಮಾನ ಮನೋಭಾವನೆ ಇದ್ದಲ್ಲಿ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದರು. ಪತ್ರಕರ್ತರು ಸಮಾಜವನ್ನು ತಿದ್ದುವಂತಹ ಕಾರ್ಯವನ್ನು ಮಾಡುತ್ತಾರೆ, ಪತ್ರಕರ್ತರು ಸಂಘಟಿತರಾಗಲು ಸಂಘದ ಅವಶ್ಯಕತೆ ಇರುತ್ತದೆ ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಒಗ್ಗಟ್ಟಾಗಿ ಶ್ರಮಿಸಿದರೆ ಉತ್ತಮವಾಗಿ ಬೆಳೆಯುತ್ತದೆ ಎಂದರು.
ಸಂಘದ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ-ಪತ್ರಕರ್ತರು ಸಾರ್ವಜನಿಕವಾಗಿ ಉತ್ತಮ ಕಾರ್ಯನಿರ್ವಹಿಸುತ್ತಾರೆ. ಪತ್ರಕರ್ತರ ಸಂಘದ ಅಭಿವೃದ್ಧಿಗಾಗಿ ಜನಪ್ರತಿನಿಧಿ ಗಳು ಸೇರಿದಂತೆ ಸಾರ್ವಜನಿಕರು ಉತ್ತಮ ಬಾಂಧವ್ಯವನ್ನು ಹೊಂದುವ ಮೂಲಕ ಪತ್ರಕರ್ತ ಹಾಗೂ ಸಂಘದ ಏಳಿಗೆಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ.ಮುರಳೀಧರ್ ಮಾತನಾಡಿ, ಕೊಡಗಿನಲ್ಲಿ ಪ್ರಥಮ ಬಾರಿಗೆ 1883 ರಲ್ಲಿ ಶನಿವಾರಸಂತೆಯಲ್ಲಿ ಶೇಷಚಂದ್ರಿಕಾ ಎಂಬ ದಿನ ಪತ್ರಿಕೆ ಹೊರಬಂದಿತು ಎಂದು ನೆನಪಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್.ಹರೀಶ್‍ಕುಮಾರ್-ಕಳೆದ 5 ವರ್ಷಗಳ ಹಿಂದೆಯೇ ಶನಿವಾರಸಂತೆ ಪತ್ರಕರ್ತರ ಸಂಘದ ಕಚೇರಿಯ ಕಟ್ಟಡ ನಿರ್ಮಾಣವಾಗಬೇಕಾಗಿತ್ತು. ಇದೀಗ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾಲ ಕೂಡಿಬಂದಿದೆ ಎಂದರು.
ಈ ಸಂದರ್ಭದಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಜರಿದ್ದರು. ಕಾರ್ಯಕ್ರಮದ ಕುರಿತು ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷ ಮಹಮದ್‍ಗೌಸ್, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷ ಸಿ.ಜೆ.ಗಿರೀಶ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಗೀತ ಹರೀಶ್, ಮಾಜಿ ಗ್ರಾ.ಪಂ. ಅಧ್ಯಕ್ಷರುಗಳಾದ ಎಸ್.ಎನ್. ರಘು, ಭುವನೇಶ್ವರಿ ಹರೀಶ್, ಮಾಜಿ ಜಿ.ಪಂ. ಸದಸ್ಯ ಡಿ.ಬಿ.ಧರ್ಮಪ್ಪ, ಪ್ರಮುಖರಾದ ಕೆ.ವಿ.ಮಂಜುನಾಥ್, ಎಸ್.ವಿ. ಜಗದೀಶ್, ಜಿಲ್ಲಾ ಪತ್ರಕರ್ತರ ಸಂಘದ ನಿದೇಶಕರು ಗಳಾದ ನಾಸೀರ್, ಆದಿತ್ಯ, ಕುಶಾಲನಗರ ಮತ್ತು ಶುಂಠಿಕೊಪ್ಪ ಹೋಬಳಿ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ವಿನ್ಸೆಂಟ್, ಶಶಿಕುಮಾರ್ ರೈ, ಹೆಬ್ಬಾಲೆ ರಘು, ಅಶ್ವಥ್, ಸೋಮವಾರಪೇಟೆ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ವಿಜಯ್ ಹಾನಗಲ್ ಮುಂತಾದವರು ಹಾಜರಿದ್ದರು.
-ವಿ.ಸಿ.ಸುರೇಶ್ ಒಡೆಯನಪುರ