ಸೋಮವಾರಪೇಟೆ,ಮಾ.11: ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಯವರು ಸರ್ವ ಶರಣರಿಗೆ ನೀಡಿದ ಉತ್ತರ-ವಿಚಾರಧಾರೆಗಳು ಇಂದಿಗೂ ಎಲ್ಲಾ ಧರ್ಮಗಳಿಗೂ ಸ್ವೀಕಾರಾರ್ಹವಾಗಿದೆ ಎಂದು ಸೋಮವಾರಪೇಟೆ ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಅಭಿಪ್ರಾಯಪಟ್ಟರು.
ತಾಲೂಕಿನ ಶಿರಂಗಾಲದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ವೇದಿಕೆ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಚನ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನಗಳು, ವಚನಕಾರರು ಹಾಗೂ ಶರಣರ ತತ್ವಗಳು ಯಾವದೇ ರೀತಿಯ ಮೌಢ್ಯಗಳನ್ನು ಹೇಳದೆ ಸರ್ವರ ಬಾಳಿಗೆ ಬೆಳಕನ್ನು ನೀಡುತ್ತವೆ. ಮಹಿಳೆಯರು ಮಹಾಮಾತೆ ಅಕ್ಕಮಹಾದೇವಿಯಂತೆ ವಿಚಾರವಂತಳಾಗುವ ಮೂಲಕ ಹೆಣ್ಣು ಅಬಲೆಯಲ್ಲ ಎಂಬದನ್ನು ನಿರೂಪಿಸಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಮಾತನಾಡಿ, ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪ ಇಂದಿನ ಪ್ರಜಾಪ್ರಭುತ್ವದ ಸಂಸತ್ ವ್ಯವಸ್ಥೆಗೆ ಬುನಾದಿಯಾಗಿದೆ. ಶರಣರು ನಡೆದ ಜೀವನದ ಹಾದಿ, ತೋರಿದ ಭಕ್ತಿ ಮಾರ್ಗ ಶತಮಾನಗಳು ಕಳೆದರೂ ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬಹುದಾದಷ್ಟು ಮೌಲ್ಯಯುತವಾಗಿವೆ ಎಂದು ಅಭಿಪ್ರಾಯಿಸಿದರು.
ಸೋಮವಾರಪೇಟೆ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಎಸ್. ಸುರೇಶ್, ಸೋಮವಾರಪೇಟೆ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಗ್ರಾಮದ ನಿವೃತ್ತ ಶಿಕ್ಷಕ ಕಾಳಿಂಗಪ್ಪ, ಪ್ರಮುಖರಾದ ಗುಡುಗಳಲೆಯ ಜಿ.ಎಂ. ಕಾಂತರಾಜು, ನಿರ್ಮಲಾ ಶಿವಲಿಂಗ, ಸೌಭಾಗ್ಯ ಕೃಷ್ಣಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿರಂಗಾಲ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರಾದ ಮರಿಯಮ್ಮ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ನಳಿನಿ ಗಣೇಶ್, ಶೀಲಾ ಡಿಸೋಜಾ, ಲೇಖಕಿ ಜಲಾ ಕಾಳಪ್ಪ, ಸೋಮವಾರಪೇಟೆ ಅಕ್ಕನಬಳಗದ ಅಧ್ಯಕ್ಷೆ ಜಲಜಾ ಶೇಖರ್ ಅವರುಗಳನ್ನು ಸನ್ಮಾನಿಸಲಾಯಿತು.