ಗೋಣಿಕೊಪ್ಪ ವರದಿ, ಮಾ. 11 : ಮಾವುಕಲ್ ಬೆಟ್ಟದಲ್ಲಿರುವ ಮಳೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಿತಿಮತಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ತಿತಿಮತಿ, ನೊಕ್ಯಾ, ಹೆಬ್ಬಾಲೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಒಂದಾಗಿ ಸೇರಿ ಅಲ್ಲಿನ ಮಾವುಕಲ್ ಅರಣ್ಯ ಪ್ರದೇಶದಲ್ಲಿರುವ ಬೆಟ್ಟಕ್ಕೆ ತೆರಳಿ ಪ್ರಾರ್ಥಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥ ಚೆಪ್ಪುಡೀರ ಕಾರ್ಯಪ್ಪ, ದಕ್ಷಿಣ ಕೊಡಗಿನಲ್ಲಿ ಮಳೆ ಇಲ್ಲದೆ, ಬಿಸಿಲಿನಿಂದ ಬೆಳೆಗಳು ಒಣಗುವ ಸ್ಥಿತಿ ಆತಂಕ ಮೂಡಿಸಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಸಂಪ್ರದಾಯದಂತೆ ಬೆಟ್ಟದಲ್ಲಿ ಮಳೆ ಮಹಾದೇಶ್ವರನಿಗೆ ಸುತ್ತಮುತ್ತಲ ಗ್ರಾಮಸ್ಥರು ಪೂಜೆ ಸಲ್ಲಿಸುವದು ವಾಡಿಕೆ. ಇದರಂತೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ ಎಂದರು. ಗ್ರಾಮದ 20 ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು. -ಸುದ್ದಿಪುತ್ರ