ಮಡಿಕೇರಿ, ಮಾ. 11: ಕೇರಳದ ವಯನಾಡು ವ್ಯಾಪ್ತಿಯ ವೈತ್ರಿ ಪೊಲೀಸ್ ಠಾಣೆ ಬಳಿ ಲಕ್ಕಡಿ ಎಂಬಲ್ಲಿ ನಕ್ಸಲ್ ಜಲೀಲ್ ಎಂಬಾತ ಪೊಲೀಸರ ಗುಂಡೇಟಿಗೆ ಬಲಿಯಾಗುವದರೊಂದಿಗೆ, ಶಂಕಿತ ವೇಲ್ ಮುರುಗನ್ ಗುಂಡೇಟಿನಿಂದ ಗಾಯಗೊಂಡು ತನ್ನ ಸಹಚರ ರೊಂದಿಗೆ ತಪ್ಪಿಸಿಕೊಂಡಿರುವ ಹಿನ್ನೆಲೆ ಕೊಡಗು-ಕೇರಳ ಗಡಿಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಪಡೆಯಿಂದ ನಿರಂತರ ಕೋಂಬಿಂಗ್ ಮುಂದುವರೆದಿದೆ.ಈ ಸಂಬಂಧ ಕಾರ್ಕಳ ನಕ್ಸಲ್ ನಿಗ್ರಹ ಕಾರ್ಯಪಡೆಯ ನಾಲ್ಕು ತಂಡಗಳನ್ನು ಕೊಡಗು-ಕೇರಳ ಗಡಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಿದ್ದು, ಕೊಡಗಿನ ಎರಡು ನಕ್ಸಲ್ ನಿಗ್ರಹ ತಂಡದ ಪೊಲೀಸರು ಮತ್ತು ಕೇರಳದ ಪ್ರತ್ಯೇಕ ತಂಡಗಳು ಕೋಂಬಿಂಗ್ನಲ್ಲಿ ನಿರತವಾಗಿವೆ. ತಾ. 6 ರಂದು ರಾತ್ರಿ ರೆಸಾರ್ಟ್ವೊಂದರಲ್ಲಿ ವಸೂಲಾತಿಗೆ ತೆರಳಿದ ಸಂದರ್ಭ ಪೊಲೀಸರಿಂದ ಹತನಾಗಿರುವ ಜಲೀಲ್ ಮೊದಲ ಬಾರಿಗೆ ದುಷ್ಕøತ್ಯದಲ್ಲಿ ಸಿಲುಕಿ ಗುಂಡೇಟಿಗೆ ಬಲಿಯಾಗಿದ್ದಾನೆಂದು ಅಲ್ಲಿನ ಪೊಲೀಸರು ದೃಢಪಡಿಸಿದ್ದಾರೆ.ಮೃತನ ಸೋದರ ಸಿ.ಪಿ. ಮ್ಯೊದೀನ್ ಸಕ್ರಿಯ ನಕ್ಸಲನಾಗಿದ್ದು, ಈ ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾಗಿ ಮಾಹಿತಿ ಲಭಿಸಿದೆ. ಇನ್ನು ವೇಲ್ ಮುರುಗನ್ ಕಾಲಿಗೆ ಗುಂಡೇಟು ಬಿದ್ದಿದ್ದರೂ ಆತ ಕಾಡಿನಲ್ಲಿ ತಪ್ಪಿಸಿಕೊಂಡು ಎಲ್ಲೋ ಅಡಗಿರುವದಾಗಿ ತಿಳಿಸಿರುವ ಪೊಲೀಸರು, ಎಲ್ಲೂ ಚಿಕಿತ್ಸೆಗೆ ದಾಖಲಾಗಿರುವ ಸುಳಿವಿಲ್ಲವೆಂದು ಖಚಿತಪಡಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ನಕ್ಸಲ್ ನಿಗ್ರಹ ಕಾರ್ಯಪಡೆ ಕೊಡಗಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸಹಿತ ಮಾಕುಟ್ಟ ಉಪವಿಭಾಗ ಸಂರಕ್ಷಿತ ಅರಣ್ಯ ಹಾಗೂ ದಕ್ಷಿಣ ಕೊಡಗಿನ ಬ್ರಹ್ಮಗಿರಿಯಿಂದ ತಲಕಾವೇರಿ-ಸಂಪಾಜೆ ಗಡಿ ತನಕ ಕೋಂಬಿಂಗ್ ಆರಂಭಿಸಿರುವದಾಗಿ ಗೊತ್ತಾಗಿದೆ.
ಅಲ್ಲದೆ, ಇದೀಗ ಲೋಕಸಭಾ ಚುನಾವಣೆಯೂ ಘೋಷಣೆಯಾಗಿ ರುವ ಕಾರಣ, ಇಂದಿನಿಂದ ಕೋಂಬಿಂಗ್ ತೀವ್ರಗೊಳಿಸಿದ್ದು, ಗಡಿಯುದ್ಧಕ್ಕೂ ಗಸ್ತು ಹೆಚ್ಚಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ‘ಶಕ್ತಿ’ಗೆ ಖಚಿತಪಡಿಸಿವೆ. ಕೇರಳದಿಂದ ತಲೆಮರೆಸಿಕೊಂಡಿರುವ ನಕ್ಸಲರು ದಕ್ಷಿಣ ಕನ್ನಡ ಅಥವಾ ಹುಣಸೂರು ಗಡಿ ವ್ಯಾಪ್ತಿ ಮೂಲಕ ಚಿಕ್ಕಮಗಳೂರಿನತ್ತ ನುಸುಳದಂತೆ ನಿಗಾ ವಹಿಸಲಾಗುತ್ತಿದೆ ಎಂದು ಈ ಮೂಲಗಳು ದೃಢಪಡಿಸಿವೆ.
ಗೋಣಿಕೊಪ್ಪಲು ವರದಿ
ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರ ಬೀಳುತ್ತಿದ್ದಂತೆಯೇ ಕೊಡಗಿನ ಗಡಿಭಾಗ ಕುಟ್ಟ ಸುತ್ತ ನಕ್ಸಲರು ರಾಜ್ಯದ ಗಡಿಯನ್ನು ಇತ್ತ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲು ಆ್ಯಂಟಿ ನಕ್ಸಲ್ ಪಡೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಕೇರಳದ ಗಡಿಭಾಗದ ಅರಣ್ಯದಲ್ಲಿ ಪೊಲೀಸ್ ಪಡೆ ಕಾಡಿನ ಇಂಚಿಂಚಿನಲ್ಲೂ ಗಸ್ತು ತಿರುಗುತ್ತಿವೆ. ಎಎನ್ಎಫ್ ತಂಡ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ಸುಳಿವಿಗಾಗಿ ತೀವ್ರ ಶೋಧಕಾರ್ಯ ನಡೆಸುತ್ತಿವೆ. ಭಾರತದ ಗಡಿಯಲ್ಲಿ ನಮ್ಮ ಯೋಧರು ಉಗ್ರರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದರೆ, ಇತ್ತ ದೇಶದೊಳಗೆ ಇರೋ ಕೆಂಪು ಉಗ್ರರಿಗಾಗಿ ಪೊಲೀಸರು ಖೆಡ್ಡಾ ತೋಡಲು ಮುಂದಾಗಿದ್ದಾರೆ. ಕೊಡಗಿನ ಗಡಿ ಕುಟ್ಟ ಸುತ್ತಮುತ್ತ ನಕ್ಸಲರಿಗಾಗಿ ಎಎನ್ಎಫ್ ಪಡೆ ಕಾರ್ಯಾಚರಣೆಗೆ ಇಳಿದಿದೆ.
ಕುಟ್ಟ ಸುತ್ತಮುತ್ತಲಿನ ಹನ್ನೊಂದು ಬೂತ್ಗಳು ನಕ್ಸಲ್ ಪೀಡಿತ ಎಂದು ಗುರುತಿಸಿದ್ದು, ಅವುಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕುಟ್ಟ, ನಾಲಡಿ, ಒಡುಂಬೆ, ಕರಿಕೆ, ಮಾಕುಟ್ಟ, ಸಂಪಾಜೆ, ಬಿರುನಾಣಿ, ತೆರಾಲು ಪ್ರದೇಶಗಳಲ್ಲಿ ಎಎನ್ಎಫ್ ತಂಡ ಹಾಗೂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಐದು ತಂಡಗಳಲ್ಲಿ 70 ಕ್ಕೂ ಹೆಚ್ಚು ಮಂದಿ ಪೊಲೀಸರು ಹಾಗೂ ಎಎನ್ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಗಡಿ ಭಾಗದ ಚೆಕ್ ಪೋಸ್ಟ್ನಲ್ಲಿ ಶಸ್ತ್ರಸಜ್ಜಿತರಾ ಕೇರಳದಿಂದ ಕೊಡಗನ್ನು ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿ ಪೊಲೀಸರು ವಾಹನ ಸಂಖ್ಯೆಯನ್ನು (ಮೊದಲ ಪುಟದಿಂದ) ನೊಂದಾಯಿಸಿ ಕೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿರುವ ಮನೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕುಟ್ಟ ಪೊಲೀಸ್ ಠಾಣೆಗೆ ಎಎನ್ಎಫ್ ಪಡೆಯ ಐಜಿ ಸೌಮೇಂಡು ಮುಖರ್ಜಿ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಕ್ಸಲರ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಒಂದು ವೇಳೆ ನಕ್ಸಲರ ಚಲನ ವಲನಗಳ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಖಚಿತವಾಗಿ ಕೊಡಗಿನ ಗಡಿಗೆ ನಕ್ಸಲರು ಆಗಮಿಸಿ ರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಆದರೂ ಸತತವಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೇರೆ ಬೇರೆ ಕಡೆಗಳಿಂದ ಸಿಬ್ಬಂದಿಗಳನ್ನು ಕರೆಸಿಕೊಂಡು ಕೋಂಬಿಂಗ್ ಮಾಡಲಾಗುತ್ತಿದೆ ಎಂದು ಐ.ಜಿ. ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಐದು ಟೆಂಪೋ ಟ್ರಾವಲರ್ಗಳಲ್ಲಿ ಕುಟ್ಟಕ್ಕೆ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಈ ಸಿಬ್ಬಂದಿಯನ್ನು ವಿವಿಧೆಡೆ ಕೂಂಬಿಂಗ್ ಕಾರ್ಯಕ್ಕಾಗಿ ನಿಯೋಜಿಸಲಾಯಿತು.
7 ತಂಡಗಳ ರಚನೆ
ಕೇರಳ ಗಡಿ ಮೂಲಕ ಕೊಡಗು ಜಿಲ್ಲೆಗೆ ನಕ್ಸಲರು ನುಸುಳುವ ಸಾಧ್ಯತೆಯ ಸುಳಿವಿನಂತೆ ಕುಟ್ಟ ಭಾಗದಿಂದ ಕೋಂಬಿಂಗ್ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಕುಟ್ಟ ಗ್ರಾಮದ ನಾಥಂಗಾಲದಿಂದ ಸಂಪಾಜೆವರೆಗೆ ಕೋಂಬಿಂಗ್ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ಕುಟ್ಟಕ್ಕೆ ಇಂದು ನಕ್ಸಲ್ ನಿಗ್ರಹ ದಳದ ಐಜಿಪಿ ಸೌಮೇಂಡು ಮುಖರ್ಜಿ ಹಾಗೂ ಎಸ್ಪಿ ಅರುಣಾಕ್ಷಗಿರಿ ತೆರಳಿ ನಕ್ಸಲ್ ಚಟುವಟಿಕೆ ನಿಗ್ರಹದ ಬಗ್ಗೆ ಮಾಹಿತಿ ನೀಡಿದರು.
ಇದರಂತೆ 15 ಜನರ 7 ತಂಡಗಳನ್ನು ರಚಿಸಲಾಗಿದ್ದು, 7 ತಂಡ ಕಾರ್ಯಾಚರಣೆ ಆರಂಭಿಸಿತು. ಗ್ರಾಮದ ಗಡಿ ಭಾಗಗಳ ಮೂಲಕ ಕಾರ್ಯಾಚರಣೆ ಆರಂಭಿಸಿತು. ಕೇರಳದಲ್ಲಿ ನಡೆದ ಎನ್ ಕೌಂಟರ್ ಬಳಿಕ ಕೊಡಗಿನಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಬಗ್ಗೆ ಇಂಟೆಲಿಜೆನ್ಸ್ ಗೆ ದೊರೆತ ಮಾಹಿತಿಯಂತೆ ಕೊಡಗಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಡಿ ಭಾಗದ ಮನೆಗಳಿಂದ ಆಹಾರ ಸಾಮಗ್ರಿ ಪಡೆಯುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ತಂಡ ಹೇಳಿಕೊಳ್ಳುತ್ತಿದೆ. 4 ದಿನ ನಿರಂತರ ಕೋಂಬಿಂಗ್ ನಡೆಸಲಿದೆ. ನಿಗ್ರಹ ದಳದ ತಂಡದಲ್ಲಿ ಅತ್ಯುನ್ನತ ಶಸ್ತ್ರಾಸ್ತ, ಜಿಪಿಎಸ್ ತಂತ್ರಜ್ಞಾನದ ಮೂಲಕ ಪಾಲ್ಗೊಂಡಿವೆ. ನಕ್ಸಲರು ನುಸುಳುವ ಪ್ರತೀ ಚಲನ- ವಲನಗಳ ಮೇಲೆ ನಿಗಾ ಇಡಲಾಗಿದೆ.
ಚಿತ್ರ, ವರದಿ: ಹೆಚ್.ಕೆ. ಜಗದೀಶ್, ಸುದಿ ಪುತ್ರ, ಶ್ರೀಸುತ