ಮಡಿಕೇರಿ, ಮಾ. 11 : ಜಾತ್ಯತೀತ ಜನತಾದಳ (ಜೆಡಿಎಸ್) ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂದು ಇಂಗಿತ ವ್ಯಕ್ತಪಡಿಸಿರುವ ಪಕ್ಷದ ಕೊಡಗು ಜಿಲ್ಲೆಯ ಪ್ರಮುಖರು, ಈ ಸಂಬಂಧ ತಾ.10ರಂದು ದೇವೇಗೌಡ ಅವರನ್ನು ಭೇಟಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುವದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕೊಡಗು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವದರಲ್ಲಿ ದೇವೇಗೌಡ ಅವರು ಐದನೇ ಸ್ಥಾನದಲ್ಲಿದ್ದು, ಅವರು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಜಯಗಳಿಸುವದರ ಜೊತೆಗೆ ಕೊಡಗಿನ ಅಭಿವೃದ್ಧಿಯೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗಿಗೆ ಸುಮಾರು ಆರು ಬಾರಿ ಭೇಟಿ ನೀಡಿದ್ದು, ಇದು ಇತಿಹಾಸ ಸೃಷ್ಟಿಸುವದರೊಂದಿಗೆ ಜಿಲ್ಲೆಯ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸಿದೆ ಎಂದು ವಿಶ್ಲೇಷಿಸಿದರು. ದೇವೇಗೌಡ ಅವರು ಕಳೆದ ಚುನಾವಣೆಯ ಸಂದರ್ಭ ‘ಇದು ತಮ್ಮ ಕೊನೆಯ ಸ್ಪರ್ಧೆ’ ಎಂದು ಹೇಳಿರುವದರ ಬಗ್ಗೆ ಗಮನಸೆಳೆದಾಗ, ಅದು ಅವರು ಹಾಸನ ಕ್ಷೇತ್ರದಿಂದ ಕೊನೆಯ ಸ್ಪರ್ಧೆ ಎಂದಿದ್ದರೇ ಹೊರತು, ಬೇರೆ ಕಡೆ ಸ್ಪರ್ಧಿಸುವದಿಲ್ಲ ಎಂದು ಹೇಳಿಲ್ಲ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವಿ. ನಾಗೇಶ್ ಹೇಳಿದರು. ಪಕ್ಷದ ವಕ್ತಾರ ಎಂ.ಟಿ. ಕಾರ್ಯಪ್ಪ ಮಾತನಾಡಿ, ಬಿಜೆಪಿಯ ಶಾಸಕರು ಹಲವು ವರ್ಷಗಳಿಂದ ಕೊಡಗನ್ನು ಪ್ರತಿನಿಧಿಸುತ್ತಿದ್ದರೂ, ಒಬ್ಬರು ವಿಧಾನಸಭಾಧ್ಯಕ್ಷರಾದರೂ, ಕೊಡಗಿನ ಕುಶಾಲನಗರ ಮತ್ತು ಪೊನ್ನಂಪೇಟೆ ತಾಲೂಕು ಬೇಡಿಕೆಯನ್ನು ಈಡೇರಿಸಲು ಸಾಧ್ಯ ವಾಗಲಿಲ್ಲ. ಆದರೆ ಕುಮಾರಸ್ವಾಮಿ ಅವರು ಕೊಡಗಿನ ಜನತೆಯ ಬೇಡಿಕೆಯನ್ನು ಈಡೇರಿಸಿದ್ದು, ಇದರಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೂ ಇದೀಗ ಬಲ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗೋಷ್ಠಿಯಲ್ಲಿ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ವಕ್ತಾರ ಆದಿಲ್ ಪಾಷಾ ಹಾಗೂ ಪ್ರಧಾನ ಕಾರ್ಯದರ್ಶಿ ರೆನ್ನಿ ಬರೋಸ್ ಉಪಸ್ಥಿತರಿದ್ದರು.