ಮಡಿಕೇರಿ, ಮಾ. 11: ಭಾರತದ 17ನೇ ಲೋಕಸಭೆಗೆ ನಡೆಯಲಿರುವ ಮಹಾಸಮರದೊಂದಿಗೆ, ಕೊಡಗು ಜಿಲ್ಲೆಯನ್ನು ಒಳಗೊಂಡಿರುವ 21ನೇ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 18 ರಂದು ಮತದಾನ ನಡೆಯಲಿದೆ. ಈ ಸಂಬಂಧ ಕೊಡಗಿನ 2 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ ಟಿ. ಯೋಗೇಶ್ ತಿಳಿಸಿದರು. ಇಲ್ಲಿನ ಜಿಲ್ಲಾ ಆಡಳಿತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿಯೊಂದಿಗೆ, ಚುನಾವಣೆ ಎದುರಿಸಲು ಜಿಲ್ಲಾ ಹಂತದಲ್ಲಿ ಸನ್ನದ್ಧವಿರುವದಾಗಿ ಘೋಷಿಸಿದರು.4,35,554 ಮತದಾರರು: ಪ್ರಸಕ್ತ ನಡೆಯಲಿರುವ ಚುನಾವಣೆಗೆ ಈಗಾಗಲೇ ಹೆಸರು ನೊಂದಾಯಿಸಿಕೊಂಡಿರುವ 4,35,554 ಮಂದಿ ಮತದಾರರಿದ್ದು, ಈ ಪೈಕಿ 2,17,231 ಪುರುಷರು ಹಾಗೂ 2,18,298 ಮಹಿಳಾ ಮತದಾರರೊಂದಿಗೆ 25 ಮಂದಿ ಅನ್ಯ ಮತದಾರರು ಅರ್ಹತೆ ಪಡೆದಿರುವರೆಂದು ಅವರು ವಿವರಿಸಿದರು. ಇದರಲ್ಲಿ 1254 ಪುರುಷರು ಮತ್ತು 44 ಮಹಿಳೆಯರು ಅಂಚೆ ಮೂಲಕ ಮತದಾನದ ಹಕ್ಕು ಹೊಂದಿರುವದಾಗಿ ನುಡಿದ ಯೋಗೇಶ್, ಮುಂದೆಯೂ ಹೆಸರು ಸೇರ್ಪಡೆ ಗೊಳಿಸದವರು; ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶ ವಿದ್ದು, ಈ ಅವಕಾಶವನ್ನು 18 ವರ್ಷ ತುಂಬಿದ ಎಲ್ಲರೂ ಬಳಸಿಕೊಳ್ಳುವಂತೆ ಸಲಹೆ ನೀಡಿದರು. 18-19 ವಯಸ್ಸಿನ 7080 ಯುವಕ - ಯುವತಿಯರು ಹೆಸರು ನೋಂದಾಯಿಸಿದ್ದಾರೆಂದು ಮಾಹಿತಿ ಇತ್ತರು.

543 ಮತಗಟ್ಟೆಗಳು : ಜಿಲ್ಲೆಯ 2 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 543 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಎಲ್ಲಾ ಪೂರ್ವ ಸಿದ್ಧತೆ ಕಲ್ಪಿಸಿಕೊಳ್ಳಲಾಗಿದೆ ಎಂದರು. ಮಾತ್ರವಲ್ಲದೆ 815 ಬಿ.ಯು. ಯಂತ್ರ, 679 ಸಿ.ಯು. ಹಾಗೂ 734 ವಿವಿ ಪ್ಯಾಟ್ ಮತಯಂತ್ರಗಳಿದ್ದು, ಯಾವದೇ ಕೊರತೆಯಿಲ್ಲದೆ ಎಲ್ಲವೂ ಅಗತ್ಯಕ್ಕಿಂತ ಅಧಿಕವಾಗಿ ಸುರಕ್ಷಿತವಾಗಿವೆ ಎಂದು ವಿವರಿಸಿದರು.

17 ಅಧಿಕ ಮತಗಟ್ಟೆ : 2014ರ ಲೋಕಸಭಾ ಚುನಾವಣೆ ಸಂದರ್ಭ 526 ಮತಗಟ್ಟೆಗಳೊಂದಿಗೆ, ಪ್ರಸಕ್ತ ಅವದಿಗೆ 17 ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2014ರ ಚುನಾವಣೆಯಲ್ಲಿ ಶೇ. 71.88 ಮತದಾನವಾಗಿದ್ದು, ಈ ಪೈಕಿ ಪುರುಷರು ಶೇ. 72.69 ಹಾಗೂ ಮಹಿಳೆಯರು ಶೇ. 71.09 ಮತ್ತು ಇತರರು ಶೇ. 4.55 ರಷ್ಟು ಹಕ್ಕು ಚಲಾಯಿಸಿದ್ದಾಗಿ ಅಧಿಕಾರಿ ನೆನಪಿಸಿದರು.

ನಿಯಂತ್ರಣ ಕೊಠಡಿ: ಕೊಡಗು ಜಿಲ್ಲೆಯಲ್ಲಿ ಈ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾಡಳಿತ ಭವನದಲ್ಲಿ ನಿಯಂತ್ರಣ ಕೊಠಡಿಯೊಂದಿಗೆ, ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿಗಾಗಿ 1950 ಸಂಖ್ಯೆಗೆ ಉಚಿತ ಕರೆ ಮಾಡಿ, ವಿಷಯ ತಿಳಿದುಕೊಳ್ಳುವಂತೆ ಅವರು ಸಲಹೆ ನೀಡಿದರು.

ಅಧಿಕಾರಿಗಳ ತಂಡ: ಚುನಾವಣೆಯ ನಿರ್ವಹಣೆಗಾಗಿ ಒಟ್ಟು 56 ದಂಡಾಧಿಕಾರಿ ಹಂತದಲ್ಲಿ ಓರ್ವ ಛಾಯಾಗ್ರಾಹಕ ಸಹಿತ ನಾಲ್ವರು ಕಾರ್ಯತತ್ಪರರಾಗಿದ್ದು, 41 ಕ್ಷೇತ್ರ ಅಧಿಕಾರಿಗಳು, 42 ಅಂಕಿ ಅಂಶ (ಲೆಕ್ಕ ತಂಡಗಳು ವ್ಯಾಪಕ ಕಾರ್ಯನಿರ್ವಹಿಸಲು ಈಗಾಗಲೇ ಮುಂದಾಗಿರುವದಾಗಿ ಸ್ಪಷ್ಟಪಡಿಸಿದರು. ಅಲ್ಲದೆ ಪ್ರಸಕ್ತ ಲೋಕಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಎಲ್ಲಾ ದಿನಗಳಲ್ಲಿ 24 ಗಂಟೆಯೂ 1950 ದೂರವಾಣಿ ಕಾರ್ಯನಿರ್ವಹಿಸಿ, ಮಾಹಿತಿ ಕಲ್ಪಿಸುವದಾಗಿ ಭರವಸೆ ನೀಡಿದರು.

ತಾ. 19 ರಿಂದ ನಾಮಪತ್ರ : ಇದೇ ತಾ. 19 ರಿಂದ ಅಧಿಕೃತವಾಗಿ ಚುನಾವಣಾ ಪ್ರಕ್ರಿಯೆಯೊಂದಿಗೆ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಜಾರಿಗೊಂಡು,

(ಮೊದಲ ಪುಟದಿಂದ) ತಾ. 26ರ ತನಕ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. ತಾ. 27 ನಾಮಪತ್ರದಲ್ಲಿ ಪರಿಶೀಲನೆ ಹಾಗೂ ತಾ. 29 ರಂದು ಕಣದಿಂದ ಹಿಂದೆ ಸರಿಯಲು ಅವಕಾಶ ಕಲ್ಪಿಸಲಾಗಿದೆ.

ಮತದಾನ : ಮುಂದಿನ ಏಪ್ರಿಲ್ 18 ರಂದು ಕೊಡಗು - ಮೈಸೂರು ಕ್ಷೇತ್ರದಲ್ಲಿ ಮತದಾನದೊಂದಿಗೆ, ಮೇ 23 ರಂದು ದೇಶದೆಲ್ಲೆಡೆ ಮತ ಎಣಿಕೆ ಬಳಿಕ ಮೇ 27ರ ಒಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿ ಲಿಖಿತ ವಿವರಿಸಿದರು.

ಕ್ಷೇತ್ರವಾರು ಮತ ವಿವರ: ಪ್ರಸಕ್ತ ಲೋಕಸಭಾ ಚುನಾವಣೆ ವೇಳೆ, ಇದುವರೆಗೆ ಹೆಸರು ನೊಂದಾಯಿಸಿರುವವರ ಪೈಕಿ 18-19 ವರ್ಷದೊಳಗಿನ 7080 ಮಂದಿ ಮತದಾರರಿದ್ದು, 5 ಸಾವಿರ ಮಂದಿ ಪ್ರಥಮವಾಗಿ ಹಕ್ಕು ಚಲಾಯಿಸಲಿದ್ದಾರೆ ಎಂದು ಯೋಗೇಶ್ ಮಾಹಿತಿ ನೀಡಿದರು. ಅಲ್ಲದೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,17,778 ಮಂದಿ ಹಕ್ಕು ಚಲಾಯಿಸಲಿದ್ದು, ವೀರಾಜಪೇಟೆ ಕ್ಷೇತ್ರದಲ್ಲಿ 2,17,776 ಮಂದಿ ಇದುವರೆಗೆ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.

ಮಹಿಳಾ ಮತದಾರರೇ ಮೇಲುಗೈ: ಜಿಲ್ಲೆಯಲ್ಲಿ ಈಗಿನ ಮತದಾರರ ಪೈಕಿ ಮಹಿಳೆಯರೇ ಮೇಲುಗೈಯಾಗಿ ಗೋಚರಿಸಿದ್ದಾರೆ. ಪ್ರಸಕ್ತ ಲಭ್ಯವಿರುವ ಮಾಹಿತಿಯಂತೆ ಪುರುಷರಿಗಿಂತ ಜಿಲ್ಲೆಯಲ್ಲಿ 1067 ಮಂದಿ ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಶೇ. 3 ಹೆಚ್ಚಳ: 2014ರ ಚುನಾವಣೆಯಲ್ಲಿ 421186 ಮತದಾರರಿದ್ದು, ಈಗ ಶೇ. 3ರ ಹೆಚ್ಚಳವಾಗಿ 435554 ಜನ ಮತಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಹಿಂದೆ 210092 ಪುರುಷರಿದ್ದರೆ, ಈಗ 217231 ಮಂದಿ, ಹಿಂದೆ 211072 ಮಹಿಳಾ ಮತದಾರರಿದ್ದು, ಈ ಬಾರಿ 218298 ಮಂದಿಗೆ ಏರಿಕೆಯಾಗಿದೆ.