ಸೋಮವಾರಪೇಟೆ, ಮಾ. 11: ದೇಶದಾದ್ಯಂತ ವಿವಿಧ ಹಿಂದೂಪರ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಇವುಗಳನ್ನು ಕೇಂದ್ರ ತನಿಖಾ ದಳಕ್ಕೆ ವಹಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಷ್ಟ್ರೀಯ ಹಿಂದೂ ಆಂದೋಲನದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಸರ್ಕಾರ ಬದಲಾದಂತೆ ಹಿಂದೂ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರ ಹಲ್ಲೆ-ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳ ನೈಜ ತನಿಖೆಯನ್ನು ನಡೆಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಈ ಹಿನ್ನೆಲೆ ಎಲ್ಲಾ ಪ್ರಕರಣಗಳ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ವಹಿಸಬೇಕೆಂದು ಆಂದೋಲನ ಸಮಿತಿಯ ಪ್ರಮುಖರು ಒತ್ತಾಯಿಸಿದ್ದಾರೆ.
ಗಣರಾಜ್ಯೋತ್ಸವ ಸಂದರ್ಭ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಮದರಸಾದಿಂದ ಬಂಧಿಸಲಾಗಿದ್ದರೆ, ಇತರ ಆರೋಪಿ ಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಪರ್ಕ ಹೊಂದಿರುವದು ದೃಢಪಟ್ಟಿದೆ. ಈ ಹಿನ್ನೆಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಯನ್ನು ನಿಷೇಧಿಸಬೇಕು ಎಂದು ಆಗ್ರಹಿಸುವ ಮನವಿ ಪತ್ರವನ್ನು ತಾಲೂಕು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ರಾಷ್ಟ್ರೀಯ ಹಿಂದೂ ಆಂದೋಲನದ ಸಂತೋಷ್, ಚೇತನ್, ಲಕ್ಷ್ಮೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.