ವೀರಾಜಪೇಟೆ, ಮಾ. 11: ಕೊಡಗಿನ ಮಣ್ಣಿನಲ್ಲಿ ಪ್ರಪ್ರಥಮ ಬಾರಿಗೆ ನೆಲೆ ಕಂಡು ಸ್ಥಾಪನೆಗೊಂಡ ಆದಿ ಮುತ್ತಪ್ಪ ದೇವರ ವಾರ್ಷಿಕ ತೆರೆ ಮಾಹೋತ್ಸವ ವಿಜೃಂಭಣೆಯಿಂದ ನಡೆದು ಅಂತ್ಯ ಕಂಡಿತು.
ವೀರಾಜಪೇಟೆ ನಗರಕ್ಕೆ ಹೊಂದಿಕೊಂಡಿರುವ ಗ್ರಾಮವಾದ ಕದನೂರು ಗ್ರಾಮ ಬೊಯಿಕೇರಿಯಲ್ಲಿ ನೆಲೆ ಕಂಡ ಶ್ರೀ ಮುತ್ತಪ್ಪ ದೇವರು. ಕಾನನದ ನಡುವೆ ದೈವದತ್ತವಾದ ಶಕ್ತಿಯನ್ನು ಪಸರಿಸಿ ಭಕ್ತರ ಕೋರಿಕೆಯನ್ನು ಈಡೇರಿಸಿಕೊಂಡು ಬಂದಿರುತ್ತದೆ. ಶ್ರೀ ಮುತ್ತಪ್ಪ ದೇವರು ಮೊದಲ ಬಾರಿಗೆ ಕೊಡಗಿನ ಮಣ್ಣಿನಲ್ಲಿ ಈ ಸ್ಥಳದಲ್ಲಿ ನೆಲೆ ಕಂಡಿರುತ್ತದೆ. ತದನಂತರ ಜಿಲ್ಲೆಯ ಇತರೆಡೆಗಳಲ್ಲಿ ತನ್ನ ಆಲಯಗಳನ್ನು ವೃದ್ಧಿಸಿಕೊಂಡು ಬಂದಿರುತ್ತದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಎತ್ತರಕ್ಕೆ ಸಾಗಿರುವ ಉದ್ಬವ ಹುತ್ತವಿರುವದು ವಿಶೇಷತೆ. ಶ್ರೀ ಚೈತನ್ಯ ಮಠಪುರ ಆದಿ ಮುತ್ತಪ್ಪ ದೇವಾಲಯದಲ್ಲಿ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಅಂತ್ಯ ಕಂಡಿತ್ತು. ವಾರ್ಷಿಕ ತೆರೆ ಮಹೋತ್ಸವದಲ್ಲಿ ಮುತ್ತಪ್ಪ ವೇಳ್ಳಾಟಂ,ಗುಳಿಗ ವೆಳ್ಳಾಟಂ, ಬಸುರಿಮಾಲ ವೆಳ್ಳಾಟಂ ಗುಳಿಗನ ತೆರೆ, ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ, ಶಾಸ್ತಪ್ಪನ್ ತೆರೆ ಮುಂತಾದ ತೆರೆಗಳು ನಡೆಯಿತು. ದೇಗುಲದ ಅಡಳಿತ ಮಂಡಳಿಯು ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿತ್ತು.