ಮಡಿಕೇರಿ, ಮಾ. 10: ಜಿಲ್ಲೆಯ ಮೂರು ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿರುತ್ತವೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಉಚಿತವಾಗಿ ಹಾಗೂ ತೊಗರಿ ಬೇಳೆ ಕೆ.ಜಿ.ಗೆ ರೂ. 38 ಪಡೆದು ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿ ಫಲಾನುಭವಿಗಳಿಗೆ ವಿತರಿಸಬೇಕಿದೆ.

ಸಾರ್ವಜನಿಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ನೀಡದಂತೆ ಕೋರಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಅಥವಾ ಕಾರ್ಯದರ್ಶಿಗಳು ಹೆಚ್ಚಿನ ದರ ವಸೂಲಿ ಮಾಡಿದ್ದಲ್ಲಿ ಉಪ ನಿರ್ದೇಶಕರ ಕಚೇರಿಗೆ ಅಥವಾ ಆಯಾಯ ತಾಲೂಕಿನ ತಹಶೀಲ್ದಾರ್ ಕಚೇರಿಗೆ ದೂರನ್ನು ಸಲ್ಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಯ ಉಪ ನಿರ್ದೇಶಕರು ಕೋರಿದ್ದಾರೆ. ಹಾಗೆಯೇ ತಾಲೂಕು ಕಚೇರಿಗಳಲ್ಲಿ ಪಡಿತರ ಚೀಟಿ ಕೊಡಿಸುತ್ತೇವೆ ಎಂದು ದಳ್ಳಾಳಿಗಳು ಸಾರ್ವಜನಿಕರಿಂದ ಹಣ ಪಡೆದು ಮೋಸಗೊಳಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿರುತ್ತಿದ್ದು, ಪಡಿತರ ಚೀಟಿ ವಿತರಣೆಯಲ್ಲಿ ಮೊದಲು ಅರ್ಜಿ ಸಲ್ಲಿಸಿದ ಫಲಾನುಭವಿಗಳ ಆಧಾರದಲ್ಲಿ ಪಡಿತರ ಚೀಟಿ ವಿತರಣೆಗೆ ಕ್ರಮವಹಿಸಲಾಗುತ್ತಿದೆ. ಹಾಗೆಯೇ ಸೆಪ್ಟೆಂಬರ್-2018ರ ಮಾಹೆಯ ನಂತರದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಈಗ ಪಡಿತರ ಚೀಟಿ ವಿತರಿಸುವದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯುವ ಸಲುವಾಗಿ ಅಗತ್ಯ ದಾಖಲೆಗಳನ್ನು (ಅಂದರೆ ಸರ್ಕಾರಿ ವೈದ್ಯರಿಂದ ದೃಢೀಕರಿಸಿದ ದಾಖಲೆಗಳನ್ನು) ಆಯಾಯ ತಾಲೂಕಿನ ಆಹಾರ ನಿರೀಕ್ಷಕರಿಗೆ ಹಾಜರುಪಡಿಸಿದಲ್ಲಿ ಅಂತಹ ಫಲಾನುಭವಿಗಳಿಗೆ ತಾತ್ಕಾಲಿಕ ಪಡಿತರ ಚೀಟಿಯನ್ನು ತುರ್ತಾಗಿ ವಿತರಿಸಲು ಕ್ರಮವಹಿಸಲಾಗುವದು.

ಹೆಚ್ಚಿನ ಮಾಹಿತಿಗೆ ಜಿಲ್ಲೆಯ ಮೂರು ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.