ಸೋಮವಾರಪೇಟೆ, ಮಾ. 10: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಮಳಿಗೆಗಳ ಹರಾಜಿನಿಂದ ಪಂಚಾಯಿತಿಗೆ ರೂ. 19.78 ಲಕ್ಷ ಆದಾಯ ಲಭಿಸಿದೆ ಎಂದು ಮುಖ್ಯಾಧಿಕಾರಿ ನಟರಾಜ್ ತಿಳಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ಸಂತೆ ಸುಂಕ ಎತ್ತಾವಳಿ, ಕುರಿ, ಕೋಳಿ ಮಾಂಸ ಮಳಿಗೆ, ಬಸ್ ನಿಲ್ದಾಣ ಸುಂಕ ಎತ್ತಾವಳಿಗಳಿಗೆ ಪಂಚಾಯಿತಿಯ ಸಭಾಂಗಣದಲ್ಲಿ ಟೆಂಡರ್ ಪ್ರಕ್ರಿಯೆ ನಡೆದವು.

ಮೀನು ಮಳಿಗೆ ಟೆಂಡರ್ ಮುಂದೂಡಿಕೆ: ಟೆಂಡರ್ ಪ್ರಕ್ರಿಯೆಯಲ್ಲಿ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಹಸಿಮೀನು ಮಾರಾಟ ಮಳಿಗೆಯ ಟೆಂಡರ್‍ನ್ನು ಮುಖ್ಯಾಧಿಕಾರಿಗಳು ಮುಂದೂಡಿದರು.

ಸಂಖ್ಯೆ 8ರ ಮಳಿಗೆ 2018-19ರಲ್ಲಿ 2.53 ಲಕ್ಷಕ್ಕೆ ಹರಾಜಾಗಿದ್ದರೆ, ಪ್ರಸಕ್ತ ವರ್ಷ 1.62 ಲಕ್ಷ, ಸಂಖ್ಯೆ 9ರ ಮಳಿಗೆ ಕಳೆದ ವರ್ಷ 2.71 ಲಕ್ಷಕ್ಕೆ ಹರಾಜಾಗಿದ್ದರೆ ಈ ವರ್ಷ 1.52 ಲಕ್ಷ ಮತ್ತು ಸಂಖ್ಯೆ 11ರ ಮಳಿಗೆ ಕಳೆದ ವರ್ಷ 1.51ಲಕ್ಷಕ್ಕೆ ಹರಾಜಾಗಿದ್ದರೆ ಈ ವರ್ಷ 66 ಸಾವಿರಕ್ಕೆ ಟೆಂಡರ್ ಹಾಕಿದ್ದರಿಂದ ಪಂಚಾಯಿತಿಗೆ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಮೂರೂ ಮಳಿಗೆಗಳ ಟೆಂಡರ್‍ನ್ನು ಮುಂದೂಡಲಾಯಿತು.

ಪಂಚಾಯಿತಿಯ ಆಡಳಿತಾಧಿಕಾರಿಯೂ ಆಗಿರುವ ತಾಲೂಕು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಟೆಂಡರ್ ಪ್ರಕ್ರಿಯೆ ನಡೆಸಲಾಗುವದು ಎಂದು ಮುಖ್ಯಾಧಿಕಾರಿ ನಟರಾಜ್ ತಿಳಿಸಿದರು.