ಸೋಮವಾರಪೇಟೆ, ಮಾ. 10: ಸಮೀಪದ ತಣ್ಣೀರುಹಳ್ಳ ಗ್ರಾಮದ ಗಿಲ್ಲಿ ಬ್ರದರ್ಸ್ ವತಿಯಿಂದ ಅಲ್ಲಿನ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಎಂವೈಸಿ ಮಸಗೋಡು ತಂಡ ಪ್ರಥಮ ಸ್ಥಾನ ಪಡೆದಿದೆ.
ತಣ್ಣೀರುಹಳ್ಳದ ಅಲ್‍ಮದೀನ ಸ್ಪೋಟ್ರ್ಸ್ ಕ್ಲಬ್ ದ್ವಿತೀಯ ಹಾಗೂ ಸಿದ್ದಾಪುರದ ಟಿ.ಕೆ. ರ್ಯಾಂಬೋ ಬಾಯ್ಸ್ ತಂಡ ತೃತೀಯ ಸ್ಥಾನಗಳಿಸಿದ್ದು, ವಿಜೇತ ತಂಡಗಳಿಗೆ ಕ್ರಮವಾಗಿ 20, 10 ಮತ್ತು 5 ಸಾವಿರ ನಗದು ಸೇರಿದಂತೆ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು.
ಬಹುಮಾನ ವಿತರಣಾ ಸಮಾರಂಭವನ್ನು ದೇವಾಲಯ ಸಮಿತಿ ಅಧ್ಯಕ್ಷ ಹೇಮಂತ್ ಉದ್ಘಾಟಿಸಿದರು. ಗಿಲ್ಲಿ ಬ್ರದರ್ಸ್ ತಂಡದ ಅಧ್ಯಕ್ಷ ಕುಮಾರ್, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಉಪಾಧ್ಯಕ್ಷ ದಿವಾಕರ್, ತಾ.ಪಂ. ಮಾಜೀ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಬೆಳೆಗಾರ ರಾಮಣ್ಣ ಅವರುಗಳು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.