ಮಡಿಕೇರಿ, ಮಾ. 10: ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಮಡಿಕೇರಿ ನಗರಸಭೆಯ ಪ್ರಸ್ತುತದ ಆಡಳಿತಾವಧಿ ಮಾರ್ಚ್ 14 ರಂದು ಮುಕ್ತಾಯಗೊಳ್ಳಲಿದೆ. 23 ವಾರ್ಡ್‍ಗಳನ್ನು ಹೊಂದಿರುವ ಮಡಿಕೇರಿ ಕೊಡಗು ಜಿಲ್ಲಾ ಕೇಂದ್ರವೂ ಆಗಿದ್ದು, ಇದೀಗ ಐದು ವರ್ಷಗಳ ಅವಧಿಗೆ ಚುನಾಯಿತರಾಗಿದ್ದವರ ಅಧಿಕಾರಾವಧಿ ಅಂತ್ಯಗೊಳ್ಳುತ್ತಿದೆ. ನಗರಸಭೆಗೆ ತಾ. 15 ರಿಂದ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ಗಳಾಗಿ ನಿಯ ಮದಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಸಾಕಷ್ಟು ರಾಜಕೀಯ ಪ್ರಹಸನ ಗಳಿಗೂ, ಕಾರಣವಾಗಿದ್ದ ಪ್ರಸ್ತುತದ ಅಧಿಕಾರಾವಧಿ ಮುಕ್ತಾಯ ಗೊಳ್ಳುತ್ತಿರುವ ಬೆನ್ನಲ್ಲೇ ಮುಂದಿನ ಚುನಾವಣೆಗಾಗಿಯೂ ಬಿರುಸಿನ ಚಟುವಟಿಕೆಗಳು ತೆರೆಮರೆಯಲ್ಲಿ ಈಗಾಗಲೇ ನಡೆಯುತ್ತಿವೆ. ಆದರೆ ಪ್ರಸಕ್ತ ಸಾಲಿನಲ್ಲಿ ಲೋಕಸಭಾ ಚುನಾವಣೆಯೂ ನಡೆಯಬೇಕಾಗಿ ರುವದರಿಂದ, ಈ ಚುನಾವಣೆ ಮುಗಿದ ಬಳಿಕವಷ್ಟೆ ನಗರಸಭಾ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಐದು ವರ್ಷಗಳ ಹಿಂದೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ 10, ಬಿಜೆಪಿಯಿಂದ 8 ಹಾಗೂ ಎಸ್‍ಡಿಪಿಐ ಪಕ್ಷದಿಂದ 4 ಮಂದಿ ಹಾಗೂ ಜೆಡಿಎಸ್‍ನಿಂದ ಒಬ್ಬರು ಚುನಾಯಿತರಾಗಿದ್ದರು.

ಆರಂಭದಲ್ಲಿ ಜುಲೇಕಾಬಿ ಅವರು ಅಧ್ಯಕ್ಷರಾಗಿ ಹಾಗೂ ಲೀಲಾಶೇಷಮ್ಮ ಅವರು ಉಪಾಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಕಾಂಗ್ರೆಸ್‍ನ ಒಳ ಒಪ್ಪಂದದಂತೆ 30 ತಿಂಗಳ ಅಧಿಕಾರಾವಧಿಯಲ್ಲಿ 15 ತಿಂಗಳ ಬಳಿಕ ಶ್ರೀಮತಿ ಬಂಗೇರ ಅವರು ಅಧ್ಯಕ್ಷರಾದರೆ ಲೀಲಾ ಶೇಷಮ್ಮ ಅವರು 30 ತಿಂಗಳು ಉಪಾಧ್ಯಕ್ಷರಾಗಿ ಉಳಿದುಕೊಂಡಿದ್ದರು.

ಎರಡನೆಯ ಅವಧಿಯಲ್ಲಿ ತೀವ್ರ ರಾಜಕೀಯ ಮೇಲಾಟಗಳು ಜರುಗಿರುವದು ಸ್ಮರಣೀಯವಾಗಿದೆ. ಈ ಅವಧಿಯಲ್ಲಿ ಕಾಂಗ್ರೆಸ್‍ನ ಒಂದಿಬ್ಬರು ಸದಸ್ಯರು ಬಿಜೆಪಿಯನ್ನು ಬೆಂಬಲಿಸಿದ್ದು, ಬಳಿಕ ಇವರ ಉಚ್ಚಾಟನೆ, ನ್ಯಾಯಾಲಯದಲ್ಲಿ ಪ್ರಶ್ನೆಯಂತಹ ಚಟುವಟಿಕೆಗಳು ನಡೆದಿದ್ದವು. ಎರಡನೇ ಅವಧಿಯ ಜಿದ್ದಾ ಜಿದ್ದಿನ ರಾಜಕೀಯದಾಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರತರದ ಸ್ಪರ್ಧೆ ನಡೆದಿರುವದು ಉಲ್ಲೇಖನೀಯ. ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಕಾವೇರಮ್ಮ ಸೋಮಣ್ಣ ಹಾಗೂ ಬಿಜೆಪಿಯ ಅನಿತಾ ಪೂವಯ್ಯ ನಡುವೆ ಸ್ಪರ್ಧೆ ನಡೆದು ಲಾಟರಿಯ ಅದೃಷ್ಟದ ಮೂಲಕ ಕಾವೇರಮ್ಮ ಸೋಮಣ್ಣ ಅಧ್ಯಕ್ಷರಾಗುವ ಅವಕಾಶ ಪಡೆದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಪ್ರಕಾಶ್ ಆಚಾರ್ಯ ಹಾಗೂ ಬಿಜೆಪಿಯ ಟಿ.ಎಸ್. ಪ್ರಕಾಶ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಟಿ.ಎಸ್. ಪ್ರಕಾಶ್‍ಗೆ ಉಪಾಧ್ಯಕ್ಷ ಸ್ಥಾನ ಒಲಿದಿತ್ತು. ಈ ಕಾರಣದಿಂದ ಎಸ್‍ಡಿಪಿಐನ ಬೆಂಬಲ ಹೊಂದಿದ್ದರೂ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ಮಾತ್ರ ದೊರೆತಿತ್ತು. ಈ ತನಕ ಕಾಂಗ್ರೆಸ್‍ನ ಸದಸ್ಯರು ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಸದಸ್ಯರು ಉಪಾಧ್ಯಕ್ಷರಾಗಿ ಇದ್ದರೂ ನಗರಸಭೆಯ ವಿಶೇಷ.