ಸೋಮವಾರಪೇಟೆ, ಮಾ. 10: ಸಾಧಕ ಮಹಿಳೆಯರ ಆದರ್ಶ ಗಳನ್ನು ಮೈಗೂಢಿಸಿಕೊಂಡು, ಛಲ ಮತ್ತು ಗುರಿಯೊಂದಿಗೆ ಮುನ್ನಡೆದರೆ ಮಾತ್ರ ಸಾಧನೆಯ ಮೆಟ್ಟಿಲೇರಬಹುದು ಎಂದು ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಭಾರತಿ ಚಂದ್ರಶೆಟ್ಟಿ ಹೇಳಿದರು.

ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನದ ಹಿಂದೆ ಹೋದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಹೆಣ್ಣಿಗೆ ಶಿಕ್ಷಣ ನೀಡಿದರೆ, ಇಡೀ ಕುಟುಂಬದವರು ವಿದ್ಯಾವಂತ ರಾಗುತ್ತಾರೆ. ಪ್ರತಿಯೊಬ್ಬ ಮಹಿಳೆಯರು ಮಕ್ಕಳ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಬೇಕು ಎಂದರು.

ದೇಶಸೇವೆ ದೇವರ ಕೆಲಸ. ತನ್ನ ಪತಿ, ತನ್ನ ಮಗನನ್ನು ಸೈನಿಕರನ್ನಾಗಿ ಮಾಡಿ, ತಾನು ಒಂಟಿಯಾಗಿ ಇಡೀ ಕುಟುಂಬವನ್ನು ಸಲಹುವ ಹೆಣ್ಣು ನಿಜವಾದ ದೇಶಪ್ರೇಮಿ ಎಂದು ಭಾರತಿ ಅವರು ಅಭಿಪ್ರಾಯಿಸಿದರು.

ಮಹಿಳೆಯರು ಇಂತಹ ಸಾಧನೆಗಳನ್ನು ಮಾಡುತ್ತಲೇ ಬರುತ್ತಿದ್ದರೂ ಸಹ ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವದು ದುರಂತ ಎಂದ ಅವರು, ಮಹಿಳಾ ಪರವಾದ ಕಾನೂನು ಬಲಿಷ್ಠವಾಗಬೇಕು ಎಂದು ಆಶಿಸಿದರು.

ವೇದಿಕೆಯಲ್ಲಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಗಾಯಿತ್ರಿ ನಾಗರಾಜ್, ಉಪಾಧ್ಯಕ್ಷೆ ಉಷಾ ತೇಜಸ್ವಿ, ಗೌರವ ಕಾರ್ಯದರ್ಶಿ ಜಲಜಾ ಶೇಖರ್, ಪದಾಧಿಕಾರಿ ಗಳಾದ ಸುಮಾ ಸುದೀಪ್, ನಳಿನಿ ಗಣೇಶ್, ಶೋಭ ಶಿವರಾಜ್, ಲೀಲಾ ನಿರ್ವಾಣಿ, ಶೋಭ ಯಶ್ವಂತ್, ವಿಜಯಲಕ್ಷ್ಮೀ ಸುರೇಶ್, ಜ್ಯೋತಿ ಶುಭಾಕರ್, ಲತ ಮಂಜು ಉಪಸ್ಥಿತರಿದ್ದರು. ನಂತರ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನರಂಜನಾ ಕಾರ್ಯಕ್ರಮ ನಡೆಯಿತು.