ಕುಶಾಲನಗರ, ಮಾ. 10: ದುಬಾರೆ ಸಾಕಾನೆ ಶಿಬಿರದಲ್ಲಿ ಆನೆ ಕಾವಾಡಿಯಾಗಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕಾರ್ಮಿಕರನ್ನು ಬಿಟ್ಟು ಇತರೆ ವ್ಯಕ್ತಿಗಳನ್ನು ಆನೆ ಕಾವಾಡಿಗಳಾಗಿ ಆಯ್ಕೆ ಮಾಡಿರುವ ಪ್ರಕ್ರಿಯೆಗೆ ದುಬಾರೆ ಆನೆ ಕಾವಾಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿಬಿರದಲ್ಲಿ 28 ಆನೆಗಳು ಮತ್ತು 3 ಮರಿಯಾನೆಗಳು ಸೇರಿದಂತೆ ಒಟ್ಟು 31 ಆನೆಗಳಿದ್ದು 24 ಮಂದಿ ದಿನಗೂಲಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 5 ವರ್ಷದಿಂದ 15 ವರ್ಷಗಳ ಅವಧಿಗಳ ಕಾಲ ದಿನಗೂಲಿಯಾಗಿ ಕೆಲಸ ನಿರ್ವಹಿಸಿದರೂ ತಮ್ಮನ್ನು ಪರಿಗಣಿಸದೆ ಇತರ ಪಟ್ಟಣಗಳಲ್ಲಿ ವಾಸವಾಗಿರುವ ವ್ಯಕ್ತಿಗಳನ್ನು ಆನೆ ಕಾವಾಡಿಗರಾಗಿ ಆಯ್ಕೆ ಮಾಡಿರುವದು ಸರಿಯಲ್ಲ ಎಂದು ಕಾವಾಡಿ ಪಾಪು ಸೇರಿದಂತೆ ಒಟ್ಟು 24 ಮಂದಿ ಕಾವಾಡಿಗರು ಕುಶಾಲನಗರ ವಲಯ ಅರಣ್ಯಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.
2018-19ನೇ ಸಾಲಿನಲ್ಲಿ ಕೊಡಗು ಅರಣ್ಯ ವೃತ್ತದಲ್ಲಿ ಆನೆ ಕಾವಾಡಿಗೆ ಬ್ಯಾಕ್‍ಲಾಗ್ ಹುದ್ದೆಗಳ ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಫೆ.4 ರಿಂದ ಕೆಲವು ಕಾವಾಡಿಗರು ಕರ್ತವ್ಯಕ್ಕೆ ಹಾಜರಾಗಿದ್ದು ಇದರಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುವ ಕಾವಾಡಿಗರಿಗೆ ಅನ್ಯಾಯ ಮಾಡಿದಂತಾಗಿದೆ. ಕೂಡಲೆ ತಮ್ಮನ್ನು ನೇಮಕಾತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ತಪ್ಪಿದಲ್ಲಿ ಹೋರಾಟ ನಡೆಸಲು ಮುಂದಾಗುವದಾಗಿ ಎಚ್ಚರಿಸಿದ್ದಾರೆ.