ಗೋಣಿಕೊಪ್ಪ, ಮಾ. 10 : ಹಾಕಿಕೂರ್ಗ್ ವತಿಯಿಂದ ಏಪ್ರಿಲ್ 14 ರಿಂದ ಕಾಕೋಟುಪರಂಬು ಶಾಲಾ ಮೈದಾನದಲ್ಲಿ ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿ ಟೂರ್ನಿ ನಡೆಸುವಂತೆ ನಿರ್ಧರಿಸ ಲಾಯಿತು.

ಕಾಕೋಟುಪರಂಬು ಸ್ಪೋಟ್ರ್ಸ್ ಕ್ಲಬ್ ಸಭಾಂಗಣದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಟೂರ್ನಿ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, 2 ಹಂತಗಳ ಟೂರ್ನಿ ನಡೆಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕೊಡವ ಕುಟುಂಬಗಳ ನಡುವೆ ಕೂರ್ಗ್ ಹಾಕಿ ಚಾಂಪಿಯನ್‍ಶಿಪ್, ಎರಡನೇ ಹಂತದಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿ ನಡೆಸುವಂತೆ ತೀರ್ಮಾನ ತೆಗೆದುಕೊಳ್ಳಲಾಯಿತು. ಕಾಕೋಟು ಪರಂಬು ಶಾಲೆಯ ಎರಡು ಮೈದಾನಗಳನ್ನು ಬಳಸಿಕೊಂಡು ಟೂರ್ನಿ ನಡೆಸುವಂತೆಯೂ, ಗ್ಯಾಲರಿ ನಿರ್ಮಾಣ, ಹಣಕಾಸು, ಮೈದಾನ ದುರಸ್ತಿ ಮಾಡಲು ಹಲವು ಉಪಸಮಿತಿ ರಚಿಸಲು ನಿರ್ಧರಿಸ ಲಾಯಿತು.

ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಟೂರ್ನಿಯು ನಾಕೌಟ್ ಮಾದರಿಯಲ್ಲಿ ನಡೆಸುವಂತೆ ನಿರ್ಧರಿಸಲಾಯಿತು. ಚಾಂಪಿಯನ್ ಶಿಪ್ ಮುಗಿದ ನಂತರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಸುವದು, ಲೀಗ್ ಮಟ್ಟದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಜಿಲ್ಲೆಯ ಕೊಡವ ಹಾಕಿಯಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದ ತಂಡಗಳನ್ನು ಸೇರಿಸಿಕೊಂಡು ನಡೆಸುವಂತೆ ತೀರ್ಮಾನಿಸಲಾಯಿತು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಚೇಂದಂಡ, ಅಂಜಪರವಂಡ, ಕೂತಂಡ, ಪಳಂಗಂಡ, ಪರದಂಡ, ಕಲಿಯಂಡ, ಮಂಡೇಪಂಡ, ನೆಲ್ಲಮಕ್ಕಡ, ಕರಿನೆರವಂಡ, ಕುಲ್ಲೇಟೀರ ಹಾಗೂ ಚೆಪ್ಪುಡೀರ ತಂಡಗಳು ಪಾಲ್ಗೊಳ್ಳುತ್ತಿವೆ. ಒಂದು ತಂಡ ಯಾವದು ಎಂದು ಇನ್ನೂ ನಿರ್ಧರಿಸಬೇಕಿದೆ ಎಂದರು.

ಕೂರ್ಗ್ ಹಾಕಿ ಚಾಂಪಿಯನ್ ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಸಮಿತಿ ಮುಖ್ಯಸ್ಥ ಎಂ. ಪಿ. ಸುಬ್ಬಯ್ಯ ಮಾತನಾಡಿ, ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಸುಮಾರು 150-200 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಸಾಕಷ್ಟು ತಂಡಗಳು ನೋಂದಣಿ ಮಾಡಿಕೊಂಡಿದ್ದು, ಉತ್ತಮ ಹಾಕಿ ಟೂರ್ನಿ ಹಾಕಿ ಪ್ರಿಯರಿಗೆ ದೊರೆಯಲಿದೆ ಸುಮಾರು 1 ತಿಂಗಳ ಕಾಲ ಟೂರ್ನಿ ನಡೆಯಲಿದೆ ಎಂದರು. ಟೂರ್ನಿ ಯಶಸ್ವಿಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಚರ್ಚಿಸಲಾಯಿತು.

ನೋಂದಣಿ : ತಂಡಗಳ ನೋಂದಣಿಗೆ ಜಿಲ್ಲೆಯಲ್ಲಿ ನೋಂದಣಿ ಕೇಂದ್ರ ಸ್ಥಾಪಿಸಲಾಗಿದ್ದು, ತಂಡಗಳು ಸಮೀಪದ ಕೇಂದ್ರಗಳಲ್ಲಿ ತಂಡದ ಹೆಸರನ್ನು ನೋಂದಾಯಿಸಿ ಕೊಳ್ಳಬಹು ದಾಗಿದೆ. ಹೆಚ್ಚಿನ ಮಾಹಿತಿಗೆ 9535546955, 9483394515 ಸಂಪರ್ಕಿಸಬಹುದಾಗಿದೆ.

ಈ ಸಂದರ್ಭ ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಸಮಿತಿ ಖಜಾಂಜಿ ಪಾರ್ಥ ಚೆಂಗಪ್ಪ, ಕಾರ್ಯದರ್ಶಿ ಬುಟ್ಟಿಯಂಡ ಚೆಂಗಪ್ಪ, ಪ್ರಮುಖರುಗಳಾದ ಪಳಂಗಂಡ ಲವ, ಉತ್ತಪ್ಪ, ನೆಲ್ಲಮಕ್ಕಡ ಪವನ್, ಕೊಕ್ಕಂಡ ರೋಶನ್, ಲಾಲಾ ಅಯ್ಯಣ್ಣ, ಮೇವಡ ಅಯ್ಯಣ್ಣ, ಗೌತಂ, ಧೀರಜ್, ಮೇವಡ ಬೆಳ್ಯಪ್ಪ, ವಿನೋದ್, ಬೇರೇರ ಬೆಳ್ಯಪ್ಪ, ನಾಚಪ್ಪ, ಕುಪ್ಪಂಡ ದಿಲನ್, ಕೆ.ಪಿ. ಉಷಾ ಉಪಸ್ಥಿತರಿದ್ದರು. -ಸುದ್ದಿಪುತ್ರ