ಮಡಿಕೇರಿ, ಮಾ. 10: ಮೂರ್ನಾಡಿನ ಗೌತಮ್ ಫ್ರ್ರೆಂಡ್ಸ್ ವತಿಯಿಂದ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿ ಮಾ. 30 ಮತ್ತು 31 ರಂದು ನಡೆಯಲಿದೆ ಎಂದು ಸಂಘದ ಖಜಾಂಚಿ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮೂರ್ನಾಡು ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಜಿಲ್ಲಾ ವ್ಯಾಪ್ತಿಯ 10 ತಂಡಗಳಿಗೆ ಅವಕಾಶವಿದೆ. ವಿಜೇತ ತಂಡಕ್ಕೆ ರೂ. 55,555, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 33,333 ನಗದು ಹಾಗೂ ಟ್ರೋಫಿಗಳನ್ನು ನೀಡಲಾಗುತ್ತದೆ. ಅಲ್ಲದೆ, 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ ರೂ. 15,555 ನಗದು ಬಹುಮಾನ ನೀಡಲಾಗುವದೆಂದು ವಿವರಿಸಿದರು.
ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಕೆಪಿಎಲ್ ಸಂಘದ ವತಿಯಿಂದ ಏಪ್ರಿಲ್ 1 ರಿಂದ 15ರವರೆಗೆ ಆಸಕ್ತ ವಾಲಿಬಾಲ್ ಆಟಗಾರರಿಗೆ ಪರಿಣತ ತರಬೇತು ದಾರರಿಂದ ವಾಲಿಬಾಲ್ ತರಬೇತಿ ನೀಡಲು ನಿರ್ಧರಿಸಲಾಗಿದೆ.
ತರಬೇತಿ ಮೂರ್ನಾಡು ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ಪ್ರತಿದಿನ ಸಂಜೆ 4 ರಿಂದ 7 ಗಂಟೆಯವರೆಗೆ ನಡೆಯಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ 9740301963, 9740797345 ಅಥವಾ 9980864777ನ್ನು ಸಂಪರ್ಕಿಸ ಬಹುದೆಂದು ತಿಳಿಸಿದರು.
ರಾಜ್ಯದಲ್ಲಿ ವಾಲಿಬಾಲ್ ಸಂಸ್ಥೆ ಅಸ್ತಿತ್ವದಲ್ಲಿದ್ದರು ಸಂಸ್ಥೆಯು ಕೊಡಗು ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಸ್ಥೆಯ ಗಮನ ಸೆಳೆಯುವ ನಿಟ್ಟಿನಲ್ಲಿ ಕೆಪಿಎಲ್ ಸಂಘವು ಕಳೆದ ನಾಲ್ಕು ವರ್ಷಗಳಿಂದ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸುತ್ತಾ ಬರುವದರೊಂದಿಗೆ, ಜಿಲ್ಲೆಯ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಎಸ್. ಗೌತಮ್, ಉಪಾಧ್ಯಕ್ಷ ಕೆ.ಎಂ. ಮೊಯ್ದು, ಕಾರ್ಯದರ್ಶಿ ಷಂಶುದ್ದೀನ್ ಹಾಗೂ ಸದಸ್ಯ ಎಂ.ಬಿ. ಹನೀಫ್ ಉಪಸ್ಥಿತರಿದ್ದರು.