ಭಾರತದ 543 ಲೋಕಸಭಾ ಕ್ಷೇತ್ರಗಳಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಏ. 18 ರಂದು ಮತದಾರರು ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರ ಪತ್ರಿಕಾಗೋಷ್ಠಿಯ ಬೆನ್ನಲ್ಲೇ, ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ಸುದ್ದಿಗೋಷ್ಠಿ ನಡೆಸಿ, ಕರ್ನಾಟಕದ ಚುನಾವಣೆ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಏ. 18 ರಂದು ಮೊದಲ ಹಂತದಲ್ಲಿ ಮೈಸೂರು - ಕೊಡಗು ಸೇರಿದಂತೆ 14 ಕ್ಷೇತ್ರಗಳಿಗೆ ಮತ್ತು ಏ. 23 ರಂದು ದ್ವಿತೀಯ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.ರಾಜ್ಯದಲ್ಲಿ 5 ಕೋಟಿ, 30 ಲಕ್ಷದ 45 ಸಾವಿರದ 721 ಮತದಾರರಿದ್ದಾರೆಂದು ಅವರು ಪ್ರಕಟಿಸಿದರು. ಈ ಪೈಕಿ 2.5 ಕೋಟಿ ಪುರುಷರು, 2.92 ಕೋಟಿ ಮಹಿಳೆಯರು ಹಾಗೂ 4718 ಇತರ ಮತದಾರರು ಇದ್ದಾರೆ ಎಂದು ತಿಳಿಸಿದರು. 58186 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು,

(ಮೊದಲ ಪುಟದಿಂದ) ವಿಶೇಷ ಮಹಿಳ ಮತಗಟ್ಟೆಗಳೊಂದಿಗೆ (ಪಿಂಕ್) ವೃದ್ಧರು ವಿಶೇಷ ಚೇತನರಿಗೆ ತಮ್ಮ ಹಕ್ಕು ಚಲಾಯಿಸಲು ಮನೆಯಿಂದಲೇ ಸಾರಿಗೆ ವ್ಯವಸ್ಥೆ ಮತ್ತು ವ್ಹೀಲ್‍ಚೇರ್ ಸೌಲಭ್ಯ ಕಲ್ಪಿಸುವದಾಗಿ ಪ್ರಕಟಿಸಿದರು.

ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಏ. 18 ರಂದು ಮತ್ತು ಎರಡನೆ ಹಂತದಲ್ಲಿ ಏ. 23 ರಂದು ಮತದಾನದೊಂದಿಗೆ ಮೇ 23 ರಂದು ಎಣಿಕೆ ಪ್ರಕ್ರಿಯೆ ನಡೆಯಲಿರುವದಾಗಿ ಮಾಹಿತಿಯಿತ್ತರು. ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ ಪರಿಶಿಷ್ಟ ಪಂಗಡಕ್ಕೆ 2 ಹಾಗೂ ಪರಿಶಿಷ್ಟ ಜಾತಿಗೆ 5 ಮೀಸಲು ಕ್ಷೇತ್ರಗಳನ್ನು ಕಲ್ಪಿಸಲಾಗಿದೆ ಎಂದು ಚುನಾವಣಾ ಆಯುಕ್ತರು ವಿವರಿಸಿದರು.