ವೀರಾಜಪೇಟೆ, ಮಾ. 10: ಮನೆ ಮನೆ ಕಾವ್ಯಗೋಷ್ಠಿ ಬಳಗದ ವತಿಯಿಂದ ಇತ್ತೀಚೆಗೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ಸನ್ನಿಧಿಯಲಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ನುಡಿ ನಮನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.

ಶ್ರೀಗಳ 112 ವರ್ಷಗಳ ಮಹತ್ವಪೂರ್ಣ ಬದುಕನ್ನು ವಿಶ್ಲೇಷಿಸುತ್ತಾ ಕೊಡಗಿನ ಕವಿಗಳು ತಮ್ಮ ಕಾವ್ಯಧಾರೆಯ ಮೂಲಕ ನುಡಿ ನಮನ ಸಲ್ಲಿಸಿದರು. ಕೊಡಗಿನ ನಾನಾ ಭಾಗಗಳಿಂದ ಆಗಮಿಸಿದ ಸುಮಾರು ಮೂವತ್ತಕ್ಕೂ ಹೆಚ್ಚು ಕವಿಗಳಿಂದ ಕವನಗಳು ವಾಚನಗೊಂಡವು.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಆರ್ಶಿವಚನ ನೀಡುತ್ತಾ ಹುಟ್ಟಿದ ಪ್ರತಿಯೊಂದು ಜೀವಿಯು ಸಹ ಮರಣ ಹೊಂದಲೇಬೇಕು ಎಂಬುದು ಜಗದ ನಿಯಮ ಅದನ್ನು ಮೀರಿ ನಡೆಯಲು ಸಾಧ್ಯವಿಲ್ಲ ಎಂದರು.

ಹಿರಿಯ ಸಾಹಿತಿಗಳಾದ ಕಸ್ತೂರಿ ಗೋವಿಂದಮ್ಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಳಗದ ಸಂಚಾಲಕ ವೈಲೇಶ್ ಮಾತನಾಡಿ, ಕೊಡಗು ಜಿಲ್ಲೆಯ ಪ್ರತಿ ತಾಲೂಕಿನ ಹಳ್ಳಿ ಹಳ್ಳಿಯ ಮನೆ ಮನೆಗಳಿಗೆ ತಲುಪಿ ಅವಕಾಶ ವಂಚಿತ ಕವಿಮನಗಳಿಗೆ ಅವಕಾಶವನ್ನು ನೀಡಲೆಂದು ಕವಿಗೋಷ್ಠಿ ಬಳಗ ಜನಿಸಿರುತ್ತದೆ. ಅದಕ್ಕಾಗಿ ಕೊಡಗಿನ ಎಲ್ಲಾ ಸಾಹಿತ್ಯದ ಬಳಗಗಳ ವಿಶ್ವಾಸಕ್ಕೆ ಪಾತ್ರವಾಗಿ ಅವರ ಸಹಾಯವನ್ನು ಪಡೆಯಲು ಯತ್ನಿಸುತ್ತಿರುವದಾಗಿ ಹೇಳಿದರು.

ವೇದಿಕೆಯಲ್ಲಿ ಹಿರಿಯ ಸಾಹಿತಿಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಮೊಣ್ಣಂಡ ಶೋಭಾ ಸುಬ್ಬಯ್ಯ, ಪಿ.ಸುಶೀಲ, ಸುನಿತಾ ಲೊಕೇಶ್, ಗಿರೀಶ್ ಕಿಗ್ಗಾಲು ಉಪಸ್ಥಿತರಿದ್ದರು. ಕೊನೆಯಲ್ಲಿ ಕವಿ ಮನಸ್ಸುಗಳಿಂದ ಭಾವಗೀತೆ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ಪುಲ್ವಾಮಾದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ನಾ ಕನ್ನಡಿಗ ಟೋಮಿ ಥೋಮಸ್ ಸ್ವಾಗತಿಸಿದರು, ಟಿ.ಡಿ. ಮೋಹನ್ ಪ್ರಾರ್ಥಿಸಿದರು, ಕಲಾವಿದ ಸತೀಶ್ ಬಿ.ಆರ್. ಕುಂಚಗಾಯನ ನಡೆಸಿಕೊಟ್ಟರು, ಶಿಕ್ಷಕಿ ನಳಿನಾಕ್ಷಿ ನಿರೂಪಿಸಿದರೆ, ವಿ. ಶಿವಮ್ಮ ಹಾಗೂ ಸಾಹಿತಿಗಳಾದ ಬಡಕಡ ರಜಿತ ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.

- ರಜಿತ ಕಾರ್ಯಪ್ಪ