ಮಡಿಕೇರಿ, ಮಾ.9 : ಅರಣ್ಯ ವಾಸಿಗಳನ್ನು ಅರಣ್ಯ ಪ್ರದೇಶದಿಂದ ಹೊರತರುವ ಕುರಿತು ದೇಶದ ಸರ್ವೋಚ್ಚ ನ್ಯಾಯಾಲಯ ಇದೇ ಫೆ.13 ರಂದು ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಲು ಅಗತ್ಯವಿರುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂದು ಬುಡಕಟ್ಟು ಕೃಷಿಕರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘÀದ ಮಡಿಕೇರಿ ತಾಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ, ನ್ಯಾಯಾಲಯದ ಆದೇಶದಿಂದ ಕೊಡಗಿನ ಆದಿವಾಸಿಗಳು ಸೇರಿದಂತೆ ಸುಮಾರು 2 ಸಾವಿರ ಅರಣ್ಯ ವಾಸಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ದೇಶದಲ್ಲಿ 20 ಲಕ್ಷ ಹಾಗೂ ರಾಜ್ಯದಲ್ಲಿ 2 ಲಕ್ಷದಷ್ಟು ಅರಣ್ಯ ವಾಸಿಗಳಿದ್ದಾರೆ. ತಲೆ ತಲಾಂತರಗಳಿಂದ ಅರಣ್ಯವನ್ನೆ ಬದುಕಾಗಿಸಿಕೊಂಡಿರುವ ಅರಣ್ಯ ವಾಸಿಗಳನ್ನು ಹೊರಕಳುಹಿಸುವ ಷಡ್ಯಂತ್ರವನ್ನು ಡೋಂಗಿ ಪರಿಸರವಾದಿ ಗಳು ಮಾಡಿದ್ದಾರೆ ಎಂದು ಆರೋಪಿಸಿದರು.

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾ.27 ರಂದು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಡಿಯರ ಮುತ್ತಪ್ಪ ತಿಳಿಸಿದರು.

ಸೋಮವಾರಪೇಟೆ ತಾಲೂಕು ಅಧ್ಯಕ್ಷ ಆರ್.ಕೆ.ಚಂದ್ರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಆದಿವಾಸಿಗಳು ಹಾಗೂ ಅರಣ್ಯವಾಸಿಗಳು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದು, ಕಾಡುಪ್ರಾಣಿಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ಬದುಕು ಸಾಗಿಸುತ್ತಿದ್ದಾರೆ, ಈ ಸಂಬಂಧ ದಿಂದ ನಮ್ಮನ್ನು ಕಿತ್ತುಕೊಳ್ಳಬೇಡಿ ಎಂದು ಒತ್ತಾಯಿಸಿದರು.

ಜಿಲ್ಲೆಯ ಶಾಸಕರು, ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಯವರೆಗೆ ನ್ಯಾಯಾಲಯದ ಆದೇಶ ಮತ್ತು ಅರಣ್ಯ ವಾಸಿಗಳು ಮುಂದಿನ ದಿನಗಳಲ್ಲಿ ಅನುಭವಿಸಬಹುದಾದ ಸಂಕಷ್ಟದ ಬಗ್ಗೆ ಧ್ವನಿ ಎತ್ತಿಲ್ಲ. ಕಾಡಿನ ಮಕ್ಕಳು ಕೇವಲ ಚುನಾವಣೆ ಸಂದರ್ಭ ಮಾತ್ರ ನೆನಪಿಗೆ ಬರುತ್ತಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರೆಗುಂದ ಅಧ್ಯಕ್ಷ ವಾಸು ಹಾಗೂ ಕೆ.ಎಂ.ಕಾವೇರಪ್ಪ ಉಪಸ್ಥಿತರಿದ್ದರು.