ಮಡಿಕೇರಿ, ಮಾ. 7: ಕೊಡಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವದರೊಂದಿಗೆ ಚುನಾವಣೆ ಸಮಯದಲ್ಲಿ ಸಮಾಜದ ಸುರಕ್ಷತೆಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಕೈಗೊಳ್ಳುವ ದಿಸೆಯಲ್ಲಿ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ದಕ್ಷಿಣ ವಲಯ ನೂತನ ಪೊಲೀಸ್ ಮಹಾನಿರೀಕ್ಷಕ ಉಮೇಶ್‍ಕುಮಾರ್ ನುಡಿದರು.ಇಂದು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಯೊಂದಿಗೆ ಪ್ರಗತಿ ಕಾಣುವಂತಾಗಿದೆ ಎಂದು ಮೆಚ್ಚುಗೆಯ ನುಡಿಯಾಡಿದರು.
ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಪ ಅಧೀಕ್ಷಕರು, ವೃತ್ತ ನಿರೀಕ್ಷಕರು ಮತ್ತು ಠಾಣಾಧಿಕಾರಿಗಳೊಂದಿಗೆ ಪರಸ್ಪರ ಪರಿಚಯ ಹಾಗೂ ಕರ್ತವ್ಯ ನಿರ್ವಹಣೆಯನ್ನು ನೆನಪಿಸಿಕೊಳ್ಳುವ ದಿಸೆಯಲ್ಲಿ ಚರ್ಚಿಸಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪೊಲೀಸ್ ಇಲಾಖೆ ಚಾಚು ತಪ್ಪದೆ ಪಾಲಿಸುವಂತೆ ಕೆಳಹಂತದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, 17 ವರ್ಷಗಳ ಹಿಂದೆ ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳನ್ನು ನೆನಪಿಸಿಕೊಂಡರು.
ಅಂದು ಇದ್ದ ಸ್ಥಿತಿಯಲ್ಲಿಯೇ ಇರುವ ಜಿಲ್ಲಾ ಪೊಲೀಸ್ ಕಚೇರಿಯನ್ನು ಅಭಿವೃದ್ಧಿಗೊಳಿಸಲು ಉನ್ನತ ಹಂತದಲ್ಲಿ ಗಮನ ಸೆಳೆಯುವ ಇಂಗಿತ ವ್ಯಕ್ತಪಡಿಸಿದ ಐಜಿ ಉಮೇಶ್‍ಕುಮಾರ್, ಕೊಡಗು ಪೊಲೀಸ್ ಕಾರ್ಯ ದಕ್ಷತೆ ಬಗ್ಗೆ ಶ್ಲಾಘನೀಯ ನುಡಿಯಾಡಿದರು.
ಗೌರವ ವಂದನೆ: ಕೊಡಗು ಪೊಲೀಸ್ ಶಸಸ್ತ್ರ ಪಡೆಯ ನೂತನ ಇನ್ಸ್‍ಪೆಕ್ಟರ್ ಎಸ್. ರಾಚಯ್ಯ ನೇತೃತ್ವದಲ್ಲಿ ಗೌರವ ರಕ್ಷೆಯೊಂದಿಗೆ ಅವರನ್ನು ಪೊಲೀಸ್ ಕೇಂದ್ರ ಕಚೇರಿಗೆ ಬರಮಾಡಿಕೊಳ್ಳಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿ ಬರಮಾಡಿಕೊಂಡರು.
ಪೊಲೀಸ್ ಉಪ ಅಧೀಕ್ಷಕರುಗಳಾದ ಕೆ.ಎಸ್. ಸುಂದರರಾಜ್, ನಾಗಪ್ಪ, ದಿನಕರ ಶೆಟ್ಟಿ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, ಪೊಲೀಸ್ ಮಹಾ ನಿರೀಕ್ಷಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು.