ಮಡಿಕೇರಿ, ಮಾ. 7: ಮಧ್ಯರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಕಾಡಿನಿಂದ ನಾಡಿಗೆ ಆಹಾರ ಅರಸುತ್ತಾ ಬಂದಿದ್ದ ಕಾಡಾನೆಯೊಂದು ತನ್ನ ಎರಡು ಮರಿಗಳೊಂದಿಗೆ ಕೆರೆಯಲ್ಲಿ ಸಿಲುಕಿಕೊಂಡು, ಹೊರ ಬರಲಾರದೆ ತೊಂದರೆಗೆ ಒಳಗಾದ ಪ್ರಸಂಗ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಸಂಭವಿಸಿತು. ಅಲ್ಲಿನ ನಿವಾಸಿ ಪಿ.ಪಿ. ಸುಬ್ಬಯ್ಯ ಎಂಬವರ ಕಾಫಿ ತೋಟದ ನಡುವೆ ಮಧ್ಯರಾತ್ರಿ ಕೆರೆಯೊಳಗೆ ಇಳಿದಿದ್ದ ತಾಯಿ ಹಾಗೂ ಎರಡು ಮರಿಯಾನೆಗಳನ್ನು ಇಂದು ಮಧ್ಯಾಹ್ನದ ವೇಳೆ ಹರ ಸಾಹಸದಿಂದ ಹೊರಗಟ್ಟಲಾಯಿತು.ತೋಟ ಮಾಲೀಕರು ತಮ್ಮ ಕಾಫಿ ಫಸಲಿಗೆ ನೀರು ಹಾಯಿಸಿದ್ದ ಪರಿಣಾಮ, ಕೆರೆಯಲ್ಲಿ ನೀರು ಇಳಿಮುಖಗೊಂಡು ಕೆಸರಿನಿಂದ ಕೂಡಿದ್ದು, ತಾಯಿ ಹಾಗೂ ಮರಿಯಾನೆಗಳು ಹಿಂತಿರುಗಿ ಬರಲಾರದೆ ಪರಿತಪಿಸುತ್ತಿದ್ದ ವಿಷಯ ತಿಳಿದು ಗ್ರಾಮಸ್ಥರು ತಂಡೋಪ ತಂಡವಾಗಿ ಅತ್ತ ಧಾವಿಸಿದರು. ಕುತೂಹಲಕಾರಿ ದೃಶ್ಯವನ್ನು ಭಯದ ನಡುವೆಯೂ ಅಚ್ಚರಿಗೊಂಡು ವೀಕ್ಷಿಸುತ್ತಿದ್ದರು.

ಅಲ್ಲದೆ ಅರಣ್ಯ ಇಲಾಖೆಗೂ ಸುದ್ದಿ ಮುಟ್ಟಿಸಿದರು. ಆ ಮೇರೆಗೆ ಕಾರ್ಯಾಚರಣೆ ಆರಂಭಿಸಿದ ಇಲಾಖೆಯ ಮಂದಿ, ಗ್ರಾಮಸ್ಥರ ಸಹಕಾರದಿಂದ ಕೆರೆ ತಡದಿಂದ ಮರಗಳನ್ನು ಹಾಯಿಸಿದಾಗ,, ಒಂದು ಮರೆಯಾನೆ ಮೇಲೆ ಸಾಗಿ ಬಂದು ಕಾಡಿನತ್ತ ತೆರಳಿತು. ಇನ್ನೊಂದು ಮರಿಯೊಂದಿಗೆ ತಾಯಿ ಎಷ್ಟು ಪ್ರಯತ್ನಿಸಿದರೂ ಬಾರದ ಕಾರಣ, ಗ್ರಾಮಸ್ಥ ಕೋಡಿರ ವಿನೋದ್ ಎಂಬವರ ಜೆಸಿಬಿ ಯಂತ್ರದ ಸಹಾಯದಿಂದ ಕೆರೆ ಏರಿಯನ್ನು ಅಗೆದು ದಾರಿ ಕಲ್ಪಿಸುವ ಮೂಲಕ ಅವೆರಡನ್ನು ಹೊರ ಕಳುಹಿಸ ಲಾಯಿತು. ಮುಂಜಾನೆಯಿಂದ ಮಧ್ಯಾಹ್ನದ ತನಕವೂ ಈ ಕಸರತ್ತು ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಮಂದಿ ಧಾವಿಸಿ ಈ ಕುತೂಹಲಕಾರಿ ಕಾರ್ಯಾಚರಣೆ ವೀಕ್ಷಿಸಿದರು.

ಕಾಫಿ ಹೂ: ಈ ವ್ಯಾಪ್ತಿಯಲ್ಲಿ ಮೊದಲ ಮಳೆ ಸುರಿಯದ ಹಿನ್ನೆಲೆಯಲ್ಲಿ ಮಾಲೀಕ ಸುಬ್ಬಯ್ಯ ತಮ್ಮ ಕಾಫಿ ತೋಟಕ್ಕೆ ನೀರು ಹಾಯಿಸಿದ್ದು, ಈಗ ಹೂ ಅರಳಿ ಇಡೀ ತೋಟ ಘಮಘಮಿಸುತ್ತಿದೆ. ಕಾಡಾನೆಗಳ

(ಮೊದಲ ಪುಟದಿಂದ) ಆಗಮನದಿಂದ ಕಾಫಿ ತೋಟದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ: ಇಡೀ ಚೇಲಾವರ ಗ್ರಾಮ ಕಾಡಾನೆಗಳ ವಾಸ ಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿ ಸಂಜೆ 6 ಗಂಟೆಯ ನಂತರ ಮುಖ್ಯ ರಸ್ತೆಯಲ್ಲಿಯೂ ಜನ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಯದಿಂದ ಜೀವನ ಸಾಗಿಸುತ್ತಿದ್ದಾರೆ. ಈ ವ್ಯಾಪ್ತಿಯ ಜನ ಕಾಲ್ನಡಿಗೆಯ ಮೂಲಕ ಚೆಯ್ಯಂಡಾಣೆ ಪಟ್ಟಣವನ್ನು ಸೇರಬೇಕಾಗಿರುವದರಿಂದ, ಹೆಚ್ಚಿನ ಭೀತಿ ಮೂಡಿದೆ. ಸರಕಾರ, ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಬದಲು ಅವುಗಳನ್ನು ಸ್ಥಳಾಂತರಿಸಿ ಜನರಿಗೆ ಶಾಶ್ವತ ನೆಮ್ಮದಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯ ಡಿ.ಸಿ.ಎಫ್ ಮರಿಯಕೃಸ್ತರಾಜು, ಎಸಿಎಫ್ ರೋಶನಿ ಎ.ಜೆ, ಆರ್.ಎಫ್.ಒ ಗೋಪಾಲ್, ಡಿ.ಆರ್.ಎಫ್.ಓ ಅಕ್ಕಮ್ಮ, ಸುಬ್ರಾಯ, ಮಾಲತೇಶ್, ಸೋಮಯ್ಯ, ಆರ್.ಆರ್.ಟಿ. ತಂಡ ಮತ್ತು ಇತರ ಸಿಬ್ಬಂದಿ ಹಾಜರಿದ್ದರು.

ನಾಪೆÇೀಕ್ಲು ಪೆÇಲೀಸ್ ಠಾಣಾ ಎಎಸ್‍ಐ ವಿಶ್ವನಾಥ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಕಾಡಾನೆಗಳು ಕೆರೆಯಿಂದ ಹೊರ ತೆರಳಿದಾಗ ನೆರೆದಿದ್ದ ಗ್ರಾಮಸ್ಥರು ನಿಟ್ಟುಸಿರುಬಿಟ್ಟರು.

-ಪಿ.ವಿ. ಪ್ರಭಾಕರ್, ಕರುಣ್ ಕಾಳಯ್ಯ, ದುಗ್ಗಳ