ಮಡಿಕೇರಿ, ಮಾ. 8: 14 ರಿಂದ 21 ರವರೆಗೆ ಅಬುಧಾಬಿಯಲ್ಲಿ ವಿಶೇಷ ಚೇತನರಿಗಾಗಿ ನಡೆಯುವ ಸ್ಪೆಷಲ್ ಒಲಿಂಪಿಕ್ಸ್ ವಲ್ಡ್ ಸಮ್ಮರ್ ಗೇಮ್ಸ್-2019ರ ಭಾರತ ತಂಡದ ಸಹ ಮುಖ್ಯಸ್ಥೆಯಾಗಿ ಆರತಿ ಕೆ.ಟಿ ಆಯ್ಕೆಯಾಗಿದ್ದಾರೆ. ಸುಮಾರು 192 ದೇಶದ ವಿಶೇಷ ಕ್ರೀಡಾಪಟುಗಳು ಭಾಗವಹಿಸುವ ಈ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿದಿಸಿ ಭಾಗವಹಿಸುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಆರತಿ ಹೇಳಿದ್ದಾರೆ. ಆರತಿ ವೃತ್ತಿಯಲಿ ಸಮಾಜ ಸೇವಕಿಯಾಗಿದ್ದು, ಬುದ್ದಿಮಾಂದ್ಯ ಮಕ್ಕಳ ಮೇಲೆ ವಿಶೇಷ ಒಲವಿರುವ ಇವರು ‘ಸಾಧ್ಯ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ವಿಶೇಷ ಚೇತನ ಮಕ್ಕಳಿಗಾಗಿ ಹೊಸಪೇಟೆ ಹಾಗೂ ಹಾಸನದಲ್ಲಿ ಮಕ್ಕಳ ವಸತಿ ಶಾಲೆಯನ್ನು ನಡೆಸುತ್ತಿದ್ದು, 110 ಮಕ್ಕಳು ತರಬೇತಿಯನ್ನು ಪಡೆಯುತಿದ್ದಾರೆ.

ಸ್ಪೆಷಲ್ ಒಲಿಂಪಿಕ್ಸ್ ವಲ್ರ್ಡ್ ಸಮ್ಮರ್ ಗೇಮ್ಸ್-2019 ಭಾರತ ತಂಡದಲ್ಲಿ, ಇವರು ನಡೆಸುತ್ತಿರುವ ಹೊಸಪೇಟೆ ‘ಸಾಧ್ಯ’ ವಿಶೇಷ ಮಕ್ಕಳ ವಸತಿ ಶಾಲೆಯಿಂದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆರತಿ ಕೆ.ಟಿ. 2015ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್‍ನಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ವಲ್ರ್ಡ್ ಸಮ್ಮರ್ ಗೇಮ್ಸ್-2015ರ ಭಾರತ ತಂಡದ ಅಥ್ಲೇಟಿಕ್ ವಿಭಾಗದ ಮುಖ್ಯಸ್ಥರಾಗಿ ಭಾಗವಹಿಸಿದ್ದರು. ಆರತಿ ಮಡಿಕೇರಿ ತಾಲೂಕು, ಪಾಲೂರು ನಿವಾಸಿ, ಅಚ್ಚುಡ ಪಿ. ಹರಿಶ್ ಕುಮಾರ್ ಅವರ ಪತ್ನಿ.