ವೀರಾಜಪೇಟೆ ಮಾ. 8 : ಸಾಂಪ್ರದಾಯಿಕವಾಗಿ ವಿವಾಹವಾದ ಪತ್ನಿಗೆ ವರದಕ್ಷಿಣೆ ತರುವಂತೆ ಪ್ರಚೋದಿಸಿ ಆಕೆಯ ಆತ್ಮಹತ್ಯೆಗೆ ಕಾರಣನಾದ ಶ್ರೀಮಂಗಲ ತಾವಳಗೇರಿ ಗ್ರಾಮದ ನಿವಾಸಿ ಪತಿ ಮಾಚಮಾಡ ಅಯ್ಯಪ್ಪ ಅಲಿಯಾಸ್ ರನ್ನು (31) ಎಂಬಾತನಿಗೆ ವೀರಾಜಪೇಟೆಯ ಎರಡನೇ ಅಧಿಕ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು 15 ವರ್ಷಗಳ ಸಜೆ ಹಾಗೂ ರೂ 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕಳೆದ ತಾ:7-02-2013 ರಂದು ಮಡಿಕೇರಿ ತಾಲೂಕು ಕೊಳಗದಾಳು ಗ್ರಾಮದ ಬಾಚಿರಣಿಯಂಡ ಬಸಪ್ಪ ಅವರ ಮಗಳು ಹೇಮಲತಾ ಅಲಿಯಾಸ್ ಸರಿತಾ ಎಂಬಾಕೆಯನ್ನು ಶ್ರೀಮಂಗಲ ಬಳಿಯ ತಾವಳಗೇರಿ ಗ್ರಾಮದ ಮಾಚಮಾಡ ಅಯ್ಯಪ್ಪನಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆ ಸಮಯದಲ್ಲಿ ಚಿನ್ನಾಭರಣ, ಬಟ್ಟೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಬಸಪ್ಪ ಅವರು ಅಳಿಯನ ಮನೆಗೆ ನೀಡಿದ್ದರು. ಪತಿ ಅಯ್ಯಪ್ಪ ಹಾಗೂ ಅವರ ಕುಟುಂಬದವರು ಹೇಮಲತಾಳಿಗೆ ನಿರಂತರವಾಗಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರಿಂದ ಮದುವೆಯಾದ ಕೆಲ ಸಮಯದಲ್ಲಿಯೇ ಮೃತಳ ಸೋದರ ಮಾವ ಕರುಂಬಯ್ಯ ಅವರು ರೂ 49,500 ನಗದು ನೀಡಿದ್ದರೂ ಇದಕ್ಕೂ ತೃಪ್ತಿಯಾಗದ ಅಯ್ಯಪ್ಪನ ಕುಟುಂಬದವರು ರೂ 15ಲಕ್ಷ ಹಣವನ್ನು ವರದಕ್ಷಿಣೆಯಾಗಿ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರಿಂದ ಹೇಮಲತಾ ಮನ ನೊಂದು ತಾ 2.10.2014ರಂದು ಪತಿಯ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತೆ ಹೇಮಲತಾಳ ಪೋಷಕರು ನೀಡಿದ ದೂರಿನ ಮೇರೆ ವೀರಾಜಪೇಟೆ ಡಿವೈಎಸ್‍ಪಿ ಕುಮಾರ್‍ಚಂದ್ರ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ 498(ಎ) 304(ಬಿ) ಐಪಿಸಿ 34 ವಿಧಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ವೀರಾಜಪೇಟೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಬಿ.ಜಿ.ರಮಾ ಅವರು ಹೇಮಲತಾಳ ಮಾವ ಮಾಚಮಾಡ ಕೆ.ಸುಬ್ಬಯ್ಯ,(64) ಅತ್ತೆ ಮಲ್ಲಿಗೆ(51) ಹಾಗೂ ಅದೇ ಕುಟುಂಬದ ಕರ್ತಮಾಡ ರೂಪ(32) ಈ ಮೂವರಿಗೆ ಮೂರು ವರ್ಷಗಳ ಸಜೆ ಹಾಗೂ ತಲಾ ರೂ 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ರೂ 20,000 ವನ್ನು ಹೇಮಲತಾ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ಸರಕಾರದ ಪರವಾಗಿ ಅಭಿಯಂತರ ಡಿ.ನಾರಾಯಣ್ ವಾದಿಸಿದರು.