ಮಡಿಕೇರಿ, ಮಾ. 7: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ನಿರ್ದೇಶನದಂತೆ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ತಾ. 9 ರಂದು ಶಿರಂಗಾಲ ಗ್ರಾಮದಲ್ಲಿ ‘ಸ್ತ್ರಿ ಅಸ್ಮಿತೆ ಮತ್ತು ವಚನ ಕ್ರಾಂತಿ’ ಎಂಬ ವಿಷಯದ ಕುರಿತು ಚಿಂತನಾಗೋಷ್ಠಿ ಹಾಗೂ ತಾ. 23 ರಂದು ಕೊಡ್ಲಿಪೇಟೆಯಲ್ಲಿ ‘ವರ್ತಮಾನಕ್ಕೂ ವಚನ’ ಎಂಬ ಕುರಿತ ವಿಚಾರಗೋಷ್ಠಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್, ತಾ. 9 ರಂದು ಬೆಳಗ್ಗೆ 10 ಗಂಟೆಗೆ ಶಿರಂಗಾಲದ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ನಡೆಯಲಿರುವ ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ ಕುರಿತ ಚಿಂತನಾಗೋಷ್ಠಿಯನ್ನು ಬಸವಾಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಲಿದ್ದು, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶಿರಂಗಾಲ ದೇವಾಲಯದ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಬೆಳಿಗ್ಗೆ 11 ಗಂಟೆಗೆ ನಡೆಯುವ ಚಿಂತನಾಗೋಷ್ಠಿಯಲ್ಲಿ ‘ಲಿಂಗ ಸಮಾನತೆ ಮತ್ತು ಸೂತಕಗಳನ್ನು ಸುಳ್ಳು ಮಾಡಿದ ವಚನ ಕ್ರಾಂತಿ’ ಎಂಬ ವಿಷಯದ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಪ್ರಧಾನ ವ್ಯವಸ್ಥಾಪಕಿ ಸೂದನ ರತ್ನಾವತಿ ಪೂಣಚ್ಚ ಮಾತನಾಡಲಿದ್ದು, ಕುಶಾಲನಗರ ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಭಾರತ್ ಸಂಚಾರ್ ನಿಗಮದ ಕುಶಾಲನಗರ ವಿಭಾಗದ ಅಭಿಯಂತರರಾದ ಲೀಲಾವತಿ ದಯಾನಂದ ಅವರು ‘ವೈಚಾರಿಕ ದಾಂಪತ್ಯಕ್ಕೆ ಅಡಿಪಾಯ ಹಾಕಿದ ಶರಣ ಕ್ರಾಂತಿ’ ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಲಿದ್ದು, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಅಪರಾಹ್ನ 2 ಗಂಟೆಗೆ ನಡೆಯುವ ವಚನ ಸಂಗಮ ಕಾರ್ಯಕ್ರಮದಲ್ಲಿ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದು, ಸೋಮವಾರಪೇಟೆ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಜಲಾ ಕಾಳಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅಕ್ಕನ ಬಳಗದ ಸೋಮವಾರಪೇಟೆ ಅಧ್ಯಕ್ಷೆ ಜಲಜಾ ಶೇಖರ್ ವಚನಗಳ ವಿಶ್ಲೇಷಣೆ ಮಾಡಲಿದ್ದಾರೆ ಎಂದು ಮಹೇಶ್ ತಿಳಿಸಿದರು. ಅಲ್ಲದೆ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 7 ಮಂದಿ ಮಹಿಳೆಯರನ್ನು ಸನ್ಮಾನಿಸಲಾಗುವದು ಎಂದು ನುಡಿದರು.

ಕೊಡಗು ಜಿಲ್ಲಾ ಕದಳಿ ಮಹಿಳಾ ವೇದಿಕೆ, ಶಿರಂಗಾಲ ಗ್ರಾಮ ಪಂಚಾಯಿತಿ, ಶ್ರೀ ಮಂಟಿಗಮ್ಮ, ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ, ಅಕ್ಕಮಹಾದೇವಿ ಮಹಿಳಾ ಸಮಾಜ, ಎಲ್ಲಾ ಸ್ತ್ರೀಶಕ್ತಿ ಸಂಘಗಳು, ಕುಶಾಲನಗರದ ಅಕ್ಕನ ಬಳಗದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ನುಡಿದರು.

ವರ್ತಮಾನಕ್ಕೂ ವಚನ: ತಾ. 23 ರಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶಾಲಾ ಆವರಣದಲ್ಲಿ ನಡೆಯಲಿರುವ ‘ವರ್ತಮಾನಕ್ಕೂ ವಚನ’ ವಿಚಾರಗೋಷ್ಠಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹಾಲಪ್ಪ, ಕೊಡ್ಲಿಪೇಟೆ ಘಟಕದ ಅಧ್ಯಕ್ಷ ಯತೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಅಂದು ಪೂರ್ವಾಹ್ನ 11 ಗಂಟೆಗೆ ನಡೆಯುವ ಮೊದಲ ವಿಚಾರಗೋಷ್ಠಿಯಲ್ಲಿ ‘ವಚನ ಕ್ರಾಂತಿಯ ಪ್ರತಿಭಟನೆ ಮತ್ತು ಪರ್ಯಾಯ ಸ್ಥಾಪನೆಯ ನೆಲೆಗಳು’ ಎಂಬ ವಿಷಯದ ಕುರಿತು ಚಿಕ್ಕಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹಮದ್ ವಿಚಾರ ಮಂಡಿಸಲಿದ್ದು, ಶನಿವಾರಸಂತೆ ಹೋಬಳಿ ಕಸಾಪ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. 12 ಗಂಟೆಗೆ ಕೊಡ್ಲಿಪೇಟೆ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪದವಿ ಕಾಲೇಜಿನ ವಿದ್ಯಾರ್ಥಿನಿ ಗಾನವಿ ಅವರು ‘ವಚನೋಕ್ತ ಶರಣ ಧರ್ಮದ ಜಾಗತಿಕ ಮೌಲ್ಯಗಳು’ ಎಂಬ ವಿಚಾರ ಮಂಡನೆ ಮಾಡಲಿದ್ದಾರೆ ಎಂದರು.

ಅಪರಾಹ್ನ 2 ಗಂಟೆಗೆ ನಡೆಯುವ ವಚನ ಸಂಗಮ ಹಾಗೂ ಸಮಾರೋಪ ಸಮಾರಂಭದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯವಹಿಸುವದರೊಂದಿಗೆ ವಚನ ವಿಶ್ಲೇಷಣೆ ಮಾಡಲಿದ್ದು, ಕೊಡ್ಲಿಪೇಟೆ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ ಅವರು ‘ವೀರವನಿತೆ’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಖಜಾಂಚಿ ಡಿ.ಬಿ. ಸೋಮಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಹದೇವಪ್ಪ, ಸೋಮವಾರಪೇಟೆ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ನಿರ್ದೇಶಕಿ ಚಂದ್ರಕಲಾ ಶಾಂಭಶಿವಮೂರ್ತಿ ಹಾಗೂ ಕುಶಾಲನಗರ ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್ ಉಪಸ್ಥಿತರಿದ್ದರು.