ಮಡಿಕೇರಿ, ಮಾ. 8: ನಗರದ ರಾಜಾಸೀಟ್ ಮಾರ್ಗವಾಗಿ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣ ಕೆಲಸಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಖುದ್ದು ಪರಿಶೀಲಿಸಿದರು. ಈ ವೇಳೆ ನಗರಸಭಾ ಆಯುಕ್ತರು ಹಾಗೂ ಪ್ರಬಾರ ಇಂಜಿನಿಯರ್ ಬಳಿ ಚರ್ಚಿಸಿದ ಅವರು, ತರಾತುರಿಯಲ್ಲಿ ಕೆಲಸವನ್ನು ಕಳಪೆಯಾಗಿ ನಿರ್ವಹಿಸಿ ಸರಕಾರದ ಅನುದಾನ ವ್ಯರ್ಥಗೊಳಿಸದಂತೆ ತಿಳಿಹೇಳಿದರು.

ಅಲ್ಲದೆ ಡಿಎಆರ್ ಪೊಲೀಸ್ ವಸತಿ ಗೃಹ ಬಳಿಯ ರಸ್ತೆ ಕಾಮಗಾರಿ ವೀಕ್ಷಿಸಿದ ಅವರು, ಕೆಲಸ ಕಳಪೆಯಿಂದ ಕೂಡಿದ್ದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ದಿಸೆಯಲ್ಲಿ ಇಂಜಿನಿಯರ್ ನಿಗಾವಹಿಸಲು ತಿಳಿಹೇಳಿದರು. ಆಯುಕ್ತ ರಮೇಶ್, ಇಂಜಿನಿಯರ್ ವನಿತ, ಪ್ರತಿನಿಧಿಗಳಾದ ಟಿ.ಎಸ್. ಪ್ರಕಾಶ್, ಉನ್ನಿಕೃಷ್ಣ, ಪಿ.ಡಿ. ಪೊನ್ನಪ್ಪ ಮತ್ತಿತರರು ಹಾಜರಿದ್ದರು.