ಮಡಿಕೇರಿ, ಮಾ. 8: ಮಡಿಕೇರಿ ತಾಲೂಕು ಕೃಷಿ ಪ್ರಾಥಮಿಕ ಸಹಕಾರ ಬ್ಯಾಂಕ್ ವತಿಯಿಂದ ಇಂದು ಕಾಲೂರು, ಮುಕ್ಕೋಡ್ಲು, ಮೊಣ್ಣಂಗೇರಿ, ಗಾಳಿಬೀಡು ಮುಂತಾದೆಡೆಯ ಪ್ರಾಕೃತಿಕ ವಿಕೋಪ ಸಂತ್ರಸ್ತ ಸದಸ್ಯರಿಗೆ ಆರ್ಥಿಕ ಪರಿಹಾರ ನೀಡಲಾಯಿತು. ಇಲ್ಲಿನ ಕೊಡಗು ಸಹಕಾರ ಒಕ್ಕೂಟ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 51 ಕುಟುಂಬಗಳಿಗೆ ಮೂರು ಹಂತದ ಪರಿಹಾರ ವಿತರಿಸಲಾಯಿತು.
ಹೆಚ್ಚಿನ ಹಾನಿಗೆ ಸಿಲುಕಿರುವವರಿಗೆ ರೂ. 30 ಸಾವಿರ, ಮಧ್ಯಂತರ ಹಾನಿಗೊಳಗಾದವರಿಗೆ ರೂ. 20 ಸಾವಿರ ಹಾಗೂ ಕೃಷಿ ಹಾನಿಗೆ ಸಿಲುಕಿದವರಿಗೆ ರೂ. 10 ಸಾವಿರದಂತೆ ಒಟ್ಟು ರೂ. 10 ಲಕ್ಷ ಮೊತ್ತದ ಪರಿಹಾರ ಕಲ್ಪಿಸಲಾಯಿತು. ಬ್ಯಾಂಕ್ ಸದಸ್ಯರಿಂದ ಸಂಗ್ರಹಿಸಿದ ಡಿವಿಡೆಂಡ್ ಮೊತ್ತ ರೂ. 7.50 ಲಕ್ಷ, ಬ್ಯಾಂಕ್ ಉಳಿತಾಯ ಖಾತೆಯ ಹಣ ರೂ. 2 ಲಕ್ಷ ಹಾಗೂ ಸಿಬ್ಬಂದಿಯ ಕೊಡುಗೆ ರೂ. 50 ಸಾವಿರವನ್ನು ಸಂತ್ರಸ್ತರಿಗೆ ನೀಡಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಮನು ಮುತ್ತಪ್ಪ ಪ್ರಕಟಿಸಿದರು.
ಸಹಕಾರ ಒಕ್ಕೂಟ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಂತ್ರಸ್ತ ಕುಟುಂಬಸ್ಥರು ಹಾಜರಿದ್ದು, ನೆರವು ಪಡೆದುಕೊಂಡರು. ಬ್ಯಾಂಕ್ ಆಡಳಿತ ಮಂಡಳಿ ಉಪಾಧ್ಯಕ್ಷ ಗಣಪತಿ, ನಿರ್ದೇಶಕರುಗಳಾದ ಎಂ.ಪಿ. ಮುತ್ತಪ್ಪ, ಬಿ.ಎಂ. ಕಾವೇರಪ್ಪ, ರ್ಯಾಲಿ ಮಾದಯ್ಯ, ಮನು ಮಹೇಶ್, ರಮೇಶ್ ಮುದ್ದಯ್ಯ, ಭುವನೇಶ್ವರಿ, ಸುಶೀಲ, ಬೆಪ್ಪುರನ ಮೇದಪ್ಪ ಮೊದಲಾದವರು ಪಾಲ್ಗೊಂಡಿದ್ದರು. ಸಹಕಾರ ಒಕ್ಕೂಟ ವ್ಯವಸ್ಥಾಪಕಿ ಮಂಜುಳ ಪ್ರಾರ್ಥನೆಯೊಂದಿಗೆ ಬ್ಯಾಂಕ್ ಅಧಿಕಾರಿ ಬಾಲಗಂಗಾಧರ್ ನಿರೂಪಿಸಿದರು.