ಮಡಿಕೇರಿ, ಮಾ. 7: ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಮಡಿಕೇರಿ ಅರಣ್ಯ ವಲಯ ವ್ಯಾಪ್ತಿಯ ಈಸ್ಟ್ ಮೀಸಲು ಅರಣ್ಯದ ಗಡಿ ಮತ್ತು ಡಿನೋಟಿಫಿಕೇಶನ್ ಪ್ರದೇಶದ ಗುರುತಿಸುವಿಕೆ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ವತಿಯಿಂದ ಜಂಟಿಯಾಗಿ ಸರ್ವೆ ಮಾಡಲಾಗುತ್ತಿದೆ.ಮಡಿಕೇರಿ ನಗರ ವ್ಯಾಪ್ತಿಗೊಳ ಪಡುವ ಗೌಡ ಸಮಾಜದ ಹಿಂಭಾಗ ಹಾಗೂ ಚೈನ್‍ಗೇಟ್ ಬಳಿಯ ಜಾಗ ಅರಣ್ಯ ಪ್ರದೇಶ ವಾಗಿದ್ದು, ಇದನ್ನು ಕೆಲವರು ಒತ್ತುವರಿ ಮಾಡಿಕೊಂಡಿ ರುವದಾಗಿ (ಮೊದಲ ಪುಟದಿಂದ) ಕಾವೇರಿ ಸೇನೆ ಸಂಚಾಲಕ ಕೆ.ಎ. ರವಿ ಚಂಗಪ್ಪ ಅವರು ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಪ್ರದೇಶಗಳಲ್ಲಿ ಸಾಕಷ್ಟು ಕುಟುಂಬಗಳು 50ರ ದಶಕಕ್ಕಿಂತಲೂ ಹಿಂದೆಯೇ ನೆಲೆಸಿರುವ ಹಿನ್ನೆಲೆಯಲ್ಲಿ ಅರಣ್ಯದ ಗಡಿ ಹಾಗೂ ಡಿನೋಟಿಫಿಕೇಶನ್ ಆಗಿರುವ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಎರಡೂ ಇಲಾಖೆಗಳ ಸಹಯೋಗದೊಂದಿಗೆ ಸರ್ವೆ ಕಾರ್ಯ ಆರಂಭಿಸಲಾಗಿದೆ. ಆರಂಭಿಕವಾಗಿ ಅರಣ್ಯ ಇಲಾಖೆಯ ಗಡಿ ಗುರುತಿಸುವ ಕಾರ್ಯ ಆಗಲಿದೆ. ನಂತರದಲ್ಲಿ ಡಿನೋಟಿಫಿಕೇಶನ್ ಆಗಿರುವ ಬಗ್ಗೆ ಸರ್ವೆ ನಡೆಯಲಿದೆ.ಮೈಸೂರಿನ ಅರಣ್ಯ ಇಲಾಖೆ ವರ್ಕಿಂಗ್ ಪ್ಲಾನ್‍ನ ಸರ್ವೆ ಅಧಿಕಾರಿ ರವೀಂದ್ರ, ಇಲ್ಲಿನ ಫಾರೆಸ್ಟರ್ ದಯಾನಂದ, ವಲಯ ಅರಣ್ಯಾಧಿಕಾರಿ ಸಚಿನ್ ಪಾಟೀಲ್ ಹಾಗೂ ಸಿಬ್ಬಂದಿಗಳು ಸರ್ವೆ ಇಲಾಖೆಯ ಪ್ರದೀಪ್ ಅವರುಗಳ ಉಸ್ತುವಾರಿಯಲ್ಲಿ ಸರ್ವೆ ಮಾಡಲಾಗುತ್ತಿದೆ.ಚೈನ್‍ಗೇಟ್ ಬಳಿಯಿಂದ ಸರ್ವೆ ಆರಂಭಿಸಲಾಗಿದ್ದು, ಗೌಡ ಸಮಾಜ ಬಳಿಗಾಗಿ ಕನ್ನಂಡಬಾಣೆ ಮಾರ್ಗದಲ್ಲಿ ಸರ್ವೆ ನಡೆಯಲಿದೆ.
ಆತಂಕದಲ್ಲಿ ನಿವಾಸಿಗಳು
ಅರಣ್ಯ ಇಲಾಖೆಯಿಂದ ಸರ್ವೆ ಕಾರ್ಯ ನಡೆಯಲಿದೆ ಎಂಬ ವಿಚಾರ ತಿಳಿದ ಈ ವ್ಯಾಪ್ತಿಯಲ್ಲಿ ನೆಲೆಸಿರುವ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಸರ್ವೆ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಜಮಾಯಿಸಿದ ಕೆಲವರು ತಮ್ಮ ಆತಂಕವನ್ನು ತೋಡಿಕೊಂಡರು. ತಲತಲಾಂತರಗಳಿಂದ, ಅಜ್ಜಂದಿರ ಕಾಲದಿಂದಲೇ ನಾವುಗಳು ಇಲ್ಲಿ ನೆಲೆಸಿದ್ದೇವೆ. ದಾಖಲೆಗಳಲ್ಲಿ ಈ ಪ್ರದೇಶ ಪೈಸಾರಿ ಎಂದಿದ್ದು, 1950-60ನೇ ಇಸವಿಯಲ್ಲೇ ನಮಗಳಿಗೆ ಸರಕಾರದಿಂದ ಪಟ್ಟೆ ದೊರೆತಿದೆ. ಈಗ ಏತಕ್ಕಾಗಿ ಸರ್ವೆ ಮಾಡುತ್ತಿದ್ದಾರೋ ಗೊತ್ತಿಲ್ಲ. ವಿಚಾರಿಸಿದರೆ ಯಾರೂ ಮಾಹಿತಿ ನೀಡುತ್ತಿಲ್ಲವೆಂದು ಹೇಳಿಕೊಂಡರು.
ಮಡಿಕೇರಿ ಈಸ್ಟ್ ಅರಣ್ಯ ವ್ಯಾಪ್ತಿಯ ಒಟ್ಟು 283 ಎಕರೆ ಪ್ರದೇಶವಿದ್ದು, ಸರ್ವೆ ಕಾರ್ಯ ಹಾಗೂ ಇತರ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ ಮೂರು ತಿಂಗಳಾದರೂ ಬೇಕಾಗಬಹುದೆಂದು ಹೇಳಲಾಗುತ್ತಿದೆ.