ಮಡಿಕೇರಿ, ಮಾ. 8: ರೋಗಿಗಳ ಆರೋಗ್ಯ ತಪಾಸಣೆಯ ಸೋಗಿನಲ್ಲಿ ಸಾರ್ವಜನಿಕವಾಗಿ ಹಣ ಸುಲಿಗೆ ಮಾಡುತ್ತಿದ್ದ ಮೈಸೂರಿನವರೆನ್ನಲಾದ ಇಬ್ಬರು ವ್ಯಕ್ತಿಗಳನ್ನು ಇಂದು ಇಲ್ಲಿನ ತಾಲೂಕು ಕಚೇರಿ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ನಡೆಯಿತು. ತಾಲೂಕು ಕಚೇರಿ ಬಳಿ ಕುಳಿತು ಕೊಂಡಿದ್ದ ಮಹೇಶ್ ಹಾಗೂ ಪ್ರಸನ್ನ ಎಂಬಿಬ್ಬರು, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ನಡೆಸಿ ದಾರಿಹೋಕರಿಂದ ರೂ. 60ರಿಂದ 100ರಂತೆ ವಸೂಲಿಯಲ್ಲಿ ತೊಡಗಿದ್ದರು.
ಇದನ್ನು ಗಮನಿಸಿದ ಆರ್.ಎಂ.ಸಿ. ಸದಸ್ಯ ಕೆ.ಎನ್. ಗಣಪತಿ ಹಾಗೂ ಇತರರು ಈ ವ್ಯಕ್ತಿಗಳ ಬಳಿ ರೋಗಿಗಳ ತಪಾಸಣೆ ನಡೆಸಲು ಹೊಂದಿರುವ ಅರ್ಹತೆ ಬಗ್ಗೆ ಪ್ರಶ್ನಿಸಿದಾಗ, ಇಬ್ಬರು ಕಕ್ಕಾಬಿಕ್ಕಿಯಾಗಿ ತಾವು ತಪಾಸಣೆ ಸ್ಥಗಿತಗೊಳಿಸುವದಾಗಿ ಅವಲತ್ತು ಕೊಂಡರು. (ಮೊದಲ ಪುಟದಿಂದ) ಇಲ್ಲಿ ಯಾರ ಅನುಮತಿ ಯೊಂದಿಗೆ ತಪಾಸಣೆ ನಡೆಸುತ್ತಿರುವದಾಗಿ ಕೇಳಿದಾಗ, ಹಿಂದಿನ ತಹಶೀಲ್ದಾರ್ ಹೆಸರಿನಲ್ಲಿ ಎಂದು ಸಮರ್ಥಿಸಲು ಯತ್ನಿಸಿದರು. ಈ ವೇಳೆ ನೂತನ ತಹಶೀಲ್ದಾರ್ ಬಳಿ ವಿಚಾರಿಸಲಾಗಿ ತಮ್ಮ ಅರಿವಿಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದರು.ಆ ಮೇರೆಗೆ ಸಾರ್ವಜನಿಕರು ಸ್ಥಳದಲ್ಲಿದ್ದ ಕೆಲವು ಉಪಕರಣಗಳ ಸಹಿತ ಈ ವ್ಯಕ್ತಿಗಳನ್ನು ನಗರ ಠಾಣಾ ಪೊಲೀಸ್ ವಶಕ್ಕೆ ಒಪ್ಪಿಸಿದರು.