*ಗೋಣಿಕೊಪ್ಪಲು, ಮಾ. 8 : ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ನಡುವಿನ ಸಾಮರಸ್ಯದ ಕೊರೆತೆಯಿಂದ ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ಅಭಿವೃದ್ಧಿಗೆ ತೊಡಕಾಗುತ್ತಿದೆ. ಪಂಚಾಯಿತಿ ಅಭಿವೃದ್ಧಿ ಹಾಗೂ ಅಧ್ಯಕ್ಷರಿಗೆ ಕಚೇರಿ ಕೊಠಡಿ ಇದ್ದರೂ ಪಂಚಾಯಿತಿಯ ಎಲ್ಲ ವಿಚಾರಗಳನ್ನು ಪತ್ರ ವ್ಯವಹಾರ ಮಾಡುವ ಮೂಲಕ ನಡೆಯುತ್ತಿದೆ.
ಈ ಬಗ್ಗೆ ಅಧ್ಯಕ್ಷರೇ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಬಹಿರಂಗ ಪಡಿಸಿದ್ದಾರೆ. ಪಿ.ಡಿ.ಓ ಪ್ರಗತಿ ಕಾರ್ಯಗಳಿಗೆ ಕ್ರಮ ಕೈಗೊಳ್ಳುತ್ತಿಲ್ಲ ಅಧ್ಯಕ್ಷನಾದ ನನ್ನ ಮಾತಿಗೆ ಬೆಲೆ ಕೊಡದೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗ್ರಾ.ಪಂ ವ್ಯಾಪ್ತಿಯ ನಿವಾಸಿಗಳು ಪಂಚಾಯಿತಿ ಮಟ್ಟದ ಕೆಲಸಕ್ಕೆ ಬಂದಾಗ ಅಧಿಕಾರಿ ಜನರ ಕೈಗೆಟುಕುತ್ತಿಲ್ಲ. ಹೀಗಾಗಿ ಜನರ ಸೇವೆ ನಡೆಯುತ್ತಿಲ್ಲ, ತಮ್ಮ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯದೆ ಇರುವದಕ್ಕೆ ಜನರು ಪಂಚಾಯಿತಿಯನ್ನು ವಾಚಮಗೋಚರವಾಗಿ ತೆಗಳುತ್ತಿದ್ದಾರೆ. ಇದು ಪಂಚಾಯಿತಿಗೆ ಮುಜುಗರ ತರುವ ವಿಚಾರ ಎಂದು ಹೇಳಿಕೊಂಡಿದ್ದಾರೆ.
ಅಧ್ಯಕ್ಷಳಾದ ತಾನು ಪರಿಶಿಷ್ಟ ಪಂಗಡದಿಂದ ಬಂದವಳು ಎಂಬ ಕಾರಣಕ್ಕೊ ಏನೋ ನನ್ನ ಬಹಳ ಕೆಳ ಮಟ್ಟದಲ್ಲಿ ನೋಡಲಾಗುತ್ತಿದೆ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯ ಯಾವದೇ ವಿಚಾರಗಳನ್ನು ನನ್ನ ಗಮನಕ್ಕೆ ತರುತಿಲ್ಲ. ಮಾಹಿತಿಗಳನ್ನು ಬಹಳ ಒತ್ತಾಯದಿಂದ ಪಡೆದುಕೊಳ್ಳಬೇಕಾಗಿದೆ. ಈ ಕಾರಣಕ್ಕಾಗಿ ನಿಯಮ ಬದ್ಧವಾಗಿ ಪತ್ರ ವ್ಯವಹಾರದ ಮೂಲಕ ಮಾಹಿತಿ ವಿನಿಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗೆ ಈಗಾಗಲೇ ಪೌರ ಕಾರ್ಮಿಕರಿಗೆ ವಸತಿ ನಿರ್ಮಿಸಿ ಕೊಡಲು ಸಾಮಾನ್ಯ ಸಭೆಯ ನಿರ್ಣಯದಂತೆ ಕ್ರಮ ಕೈಗೊಳ್ಳಿ ಎಂದು ಪತ್ರ ಬರೆದರೂ, ಈ ವಿಚಾರದ ಬಗ್ಗೆ ಗಮನ ಹರಿಸುತ್ತಿಲ್ಲ. ಅಲ್ಲದೆ ಮೂರನೇ ವಾರ್ಡಿನ ಮಾರುಕಟ್ಟೆ ಸಮೀಪವಿರುವ ಪರವಾನಗಿಯನ್ನು ಹೊಂದದೆ ಅನಧಿಕೃತವಾಗಿ ಮೀನು ಮಾರಾಟ ಮಳಿಗೆ ತೆರೆದಿರುವದನ್ನು ಮುಚ್ಚಿಸಬೇಕೆಂದು ಸಾಮಾನ್ಯ ಸಭೆಯಲ್ಲಿ ನಿರ್ಣಯವಾದರೂ ಅಧಿಕಾರಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್.ಎಂ.ಸಿ ಮಳಿಗೆಗಳ ಬಗ್ಗೆ ನ್ಯಾಯಾಲಯದಲ್ಲಿ ಅಫೀಲನ್ನು ಹಿಂಪಡೆದು ಮಳಿಗೆಗಳನ್ನು ಪಂಚಾಯಿತಿಯ ವಶಕ್ಕೆ ಪಡೆದುಕೊಳ್ಳುವಂತೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ನಿರ್ಣಯವಾಗಿದ್ದರೂ ಮಳಿಗೆಗಳನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಹಾಗೆಯೇ ಗ್ರಾ.ಪಂ ವ್ಯಾಪ್ತಿಯ 184 ಅಂಗಡಿ ಮಳಿಗೆಗಳನ್ನು ಟೆಂಡರ್ ನಡೆಸಬೇಕೆಂದು ಸಭೆ ತೀರ್ಮಾನಿಸಿದರೂ, ಸಭೆಯ ನಿರ್ಣಯಗಳು ಅಧಿಕಾರಿಯಿಂದ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಸಂದರ್ಭ ಗ್ರಾ.ಪಂ ಸದಸ್ಯ ಮುರುಗ, ರಾಮಕೃಷ್ಣ, ರತಿ ಅಚ್ಚಪ್ಪ ಉಪಸ್ಥಿತರಿದ್ದರು.