ಮಡಿಕೇರಿ, ಮಾ. 5: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಕ್ಕಳ ಕಲರವ ಕಂಡುಬಂದಿತು... ಹಲವು ವೇಷ-ಭೂಷಣಗಳೊಂದಿಗೆ ವಿವಿಧ ಪಾತ್ರಧಾರಿಗಳಾಗಿದ್ದ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಗಮನ ಸೆಳೆದರಲ್ಲದೆ ಸಾಮಾಜಿಕ ಕಳಕಳಿಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದು ವಿಶೇಷತೆಯಾಗಿತ್ತು.
ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಗು ಜಿಲ್ಲೆ ಹಾಗೂ ಸಹಪಠ್ಯ ಚಟುವಟಿಕೆಗಳ ವಿಭಾಗ, ಫೀ.ಮಾ. ಕಾರ್ಯಪ್ಪ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ‘ಅಭಿರಂಗ’ ಎಂಬ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ನೀನಾಸಂ ತಂಡದವರಿಂದ ತರಬೇತಿ ಪಡೆದಿದ್ದ ಮಕ್ಕಳು ಈ ನಾಟಕೋತ್ಸವದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಎರಡು ರಂಗ ಪ್ರದರ್ಶನದ ನಾಟಕ ಹಾಗೂ ಮೂರು ಬೀದಿ ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ವೃದ್ಧಾಪ್ಯ ವೇತನ ವಂಚಿತರಾದ ವೃದ್ಧರ ಅಳಲನ್ನು ತೋರಿಸುವ ಹಾಗೂ ಇಳಿವಯಸ್ಸಿನಲ್ಲಿ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ಹಿರಿಯರ ಒದ್ದಾಟದ ‘ಸಂಬಂಧದ ಆಟ’ ಜಿಲ್ಲೆಯಲ್ಲಿ ಕಳೆದ ಬಾರಿ ಎದುರಾದ ಪ್ರಾಕೃತಿಕ ದುರಂತದ ಸನ್ನಿವೇಶವನ್ನು ಪ್ರತಿಬಿಂಬಿಸುವ ‘ಪ್ರಾಕೃತಿಕ ವಿಕೋಪ’ ಮತ್ತು ಬಾಲ್ಯವಿವಾಹದ ದುಷ್ಪರಿಣಾಮದ ಕಥೆಯನ್ನು ಸಾರುವ ‘ಬಾಲ್ಯವಿವಾಹ’ ಎಂಬ ಬೀದಿ ನಾಟಕಗಳು ಪ್ರದರ್ಶನಗೊಂಡವು. ಮಡಿಕೇರಿ ಬಾಲಕರ ಬಾಲಮಂದಿರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಈ ನಾಟಕವನ್ನು ಪ್ರದರ್ಶಿಸಿದರು.
ಇದರೊಂದಿಗೆ ರಂಗ ಪ್ರದರ್ಶನ ನಾಟಕವಾಗಿ ಕಾಲೇಜಿನ ಸಭಾಂಗಣದಲ್ಲಿ ಜೇನು ಕುರುಬ ಸಮುದಾಯದ ಶೈಲಿ ಮತ್ತು ಹಾಡುಗಳ ಸಹಿತವಾಗಿ, ಪ್ರಗತಿ ಎಂದರೆ ಕೇವಲ ಹಣ, ಕಟ್ಟಡ, ಕಾರು ಇತ್ಯಾದಿಗಳಲ್ಲ... ಪರಿಸರ ಮಿತ್ರ ನಾಗಿಯೂ ತೃಪ್ತ ಜೀವನಬೇಕೆಂಬ ಕಥಾ ವಸ್ತುವನ್ನು ಒಳಗೊಂಡ ‘ಗುಬ್ಬಿ ಹಾಡು’ ಎಂಬ ನಾಟಕವನ್ನು ಬಸವನಹಳ್ಳಿ ಗಿರಿಜನ ಆಶ್ರಮ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬಂತೆ ಗಾದೆ ಗಳಿಂದಲೇ ಹೆಣೆಯಲ್ಪಟ್ಟ ಮತ್ತೊಂದು ನಾಟಕ ‘ಹೆಬ್ಬಾಲ’ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿ ಗಳಿಂದ ಪ್ರದರ್ಶನಗೊಂಡಿತು.
ಕಲೆ ರೂಢಿಸಿಕೊಳ್ಳಲು ಕರೆ
ಅಭಿರಂಗ ಮಕ್ಕಳ ನಾಟ ಕೋತ್ಸವವನ್ನು ಉದ್ಘಾಟಿಸಿದ ಜಿ.ಪಂ. ಸಿಇಓ ಕೆ. ಲಕ್ಷ್ಮಿಪ್ರಿಯ ಅವರು ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ನಾಟಕ, ಸಂಗೀತದಂತಹ ಕಲೆಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಅತಿಥಿಗಳಾಗಿದ್ದ ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಅವರು ವಿದ್ಯೆಯ ಜೊತೆಗೆ ಇನ್ನಿತರ ಉತ್ತಮ ಕಲೆಗಳನ್ನು ರೂಪಿಸಿಕೊಳ್ಳಲು ಸಲಹೆಯಿತ್ತರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಆರುಂಧತಿ ಮುಂದಾಳತ್ವದಲ್ಲಿ ಈ ನಾಟಕೋತ್ಸವ ಯಶಸ್ಸು ಕಂಡಿತು. ಈ ಸಂದರ್ಭದಲ್ಲಿ ಮತದಾನದ ಮಹತ್ವವನ್ನೂ ಸಾರಲಾಯಿತು. ಪ್ರಬಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್, ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಕಾಲೇಜಿನ ಪ್ರಾಂಶುಪಾಲ ಟಿ.ಡಿ. ತಿಮ್ಮಯ್ಯ, ಉಪನ್ಯಾಸಕಿ ಗಾಯತ್ರಿ ಹಾಜರಿದ್ದರು.
ಆರುಂಧತಿ ಅವರು ಪ್ರಾಸ್ತಾವಿ ಕವಾಗಿ ನಾಟಕೋತ್ಸವದ ಆಯೋಜನೆಯ ಕುರಿತು ಮಾತನಾಡಿ ಸ್ವಾಗತಿಸಿದರು. ಸವಿತಾ ಕೀರ್ತನ್ ನಿರೂಪಿಸಿದರು. ಈ ಸಂದರ್ಭ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಕಲಾಸಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. - ಶಶಿ