ಮಡಿಕೇರಿ, ಮಾ. 6: ಜಿಲ್ಲೆಯ ವಿಶೇಷ ಚೇತನ ಮಕ್ಕಳಿಗಾಗಿ ಇಂದು ನಗರದ ಓಂಕಾರ ಸದನದಲ್ಲಿ ಅಭಿರಂಗ ಉತ್ಸವ ಆಯೋಜಿಸುವ ಮೂಲಕ ಅವರಲ್ಲಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಈ ವೇಳೆ ಅಂತಹ ಮಕ್ಕಳು ವಿಭಿನ್ನ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರ ಮನಸೂರೆಗೊಂಡರು.

ಅಪ್ರತಿಮ ರಾಷ್ಟ್ರಪುರುಷರಾದ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್, ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮೊದಲ ಪ್ರಧಾನಿ ನೆಹರು, ದೇಶದ ಸೈನಿಕ ಸೇರಿದಂತೆ ಗುಡಿಯ ಅರ್ಚಕನಿಂದ ಬೀದಿ ಭಿಕ್ಷುಕರ ತನಕ ಪುಟಾಣಿಗಳು ವಿಭಿನ್ನ ಪಾತ್ರಗಳಲ್ಲಿ ಗಮನ ಸೆಳೆದರು.

ಅಲ್ಲದೆ ತಮ್ಮ ಪ್ರತಿಭೆಯನ್ನು ಬಣ್ಣಗಳಿಂದ ಚಿತ್ರಿಸುವ ಮೂಲಕ ರಂಗಿನ ಲೋಕ ಸೃಷ್ಟಿಸಿ ಪ್ರಶಂಸೆಗಳಿಸಿದರು. ವಿವಿಧ ಕ್ರೀಡೆಗಳಲ್ಲಿ ತಮ್ಮ ಸಾಮಥ್ರ್ಯ ತೋರಿದ್ದಲ್ಲದೆ, ಗಾಯಗಳೊಂದಿಗೆ ಸಾಂಸ್ಕøತಿಕ ಚಟುವಟಿಕೆಗಳನ್ನು ಪ್ರದರ್ಶಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪುರಸ್ಕಾರಗಳನ್ನು ಗಿಟ್ಟಿಸಿಕೊಂಡರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಅವರು ಜ್ಯೋತಿ ಬೆಳಗುವದರೊಂದಿಗೆ ಈ ವಿಶೇಷ ಮಕ್ಕಳ ಅಭಿರಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ವಿಶೇಷ ಮಕ್ಕಳಿಗಾಗಿ ಆಯೋಜಿಸಿರುವ ಚಟುವಟಿಕೆಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಾಧನೆ ತೋರುವಂತೆ ತಿಳಿಹೇಳಿದರು. ಅಲ್ಲದೆ, ವಿಶೇಷ ಮಕ್ಕಳ ಪ್ರಯತ್ನಕ್ಕೆ ದೇವರು ಅನುಗ್ರಹಿಸಿ, ಅಂತಹವರ ಬದುಕಿನಲ್ಲಿ ಬೆಳಕು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಪಾಲಿಬೆಟ್ಟ ಚೆಷೈರ್‍ಹೋಂನ ಶಿವರಾಜ್ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ವೇದಿಕೆ ಮೂಲಕ ಪ್ರತಿಭೆಗಳನ್ನು ಹೊರಹಾಕಲು ಅವಕಾಶ ಕಲ್ಪಿಸಿರುವದು ಶ್ಲಾಘನೀಯವೆಂದರು.

ವಿಶೇಷ ಮಕ್ಕಳ ಕೇಂದ್ರ ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನದ ಗೀತಾ ಶ್ರೀಧರ್, ಸ್ವಸ್ಥ ಸಂಸ್ಥೆಯ ಮಂಜುಳ, ಅಮೃತವಾಣಿ ಕೇಂದ್ರದ ಸುಧಾ, ಇಲಾಖೆ ಉಪನಿರ್ದೇಶಕಿ ಅರುಂಧತಿ ಮೊದಲಾದವರು ಪಾಲ್ಗೊಂಡು ಆಶಯ ನುಡಿಯಾಡಿದರು.

ವಿವಿಧ ಪೈಪೋಟಿಯೊಂದಿಗೆ ಜಾನಪದ ಕಲೆಯಂತಹ ಸೊಗಡನ್ನು ಪ್ರದರ್ಶಿಸಿದ ಈ ಮಕ್ಕಳನ್ನು ಇಲಾಖೆ ಮುಖಾಂತರ ಪ್ರೋತ್ಸಾಹಿಸಿ ಹುರಿದುಂಬಿಸಲಾಯಿತು.

ಸ್ವಸ್ಥ ಬಳಗದ ರಾಂಗೌತಂ, ಮುರುಗೇಶ್, ಅರುಣಾ, ಮೊದಲಾದವರು ಮತ್ತು ಇಲಾಖೆಯ ಸಲಿತ, ಯಶೋಧ ಮತ್ತಿತರರು ಹಾಜರಿದ್ದರು.