(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮಾ. 6: ದ.ಕೊಡಗಿನ ವಿವಿಧ ಭಾಗದಲ್ಲಿ ಕಾಡಾನೆಗಳಿಂದ ಇತ್ತೀಚೆಗೆ ಅನೇಕ ಸಾವು ನೋವು ಸಂಬವಿಸಿದ್ದು ಕಾಡಾನೆ ಉಪಟಳ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ ಇದೀಗ ಹುಲಿಯ ಸರದಿ ಆರಂಭವಾಗಿದೆ. ಸಮೀಪದ ನಾಗರಹೊಳೆ, ಅಭಯಾರಣ್ಯದಿಂದ ಹುಲಿ ರೈತರ, ಕಾಫಿ ಬೆಳೆಗಾರರ, ಕಾರ್ಮಿಕರ ವಾಸಿಸುವ ಲೈನ್ ಮನೆಯ ಸಮೀಪ ಹಾಗೂ ಕಾಫಿ ತೋಟದತ್ತ ಸಂಚಾರ ಮಾಡುತ್ತಿವೆ.

ಹುಲಿಯು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಆಹಾರಕ್ಕಾಗಿ ರೈತರು ಸಾಕಿರುವ ಹಸು, ಕರು, ಗೂಳಿಯ ಮೇಲೆ ಹೊತ್ತಿಲ್ಲದ ಹೊತ್ತಿನಲ್ಲಿ ದಾಳಿ ನಡೆಸಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ನಾಗರಿಕರಲ್ಲಿ ಭಯದ ವಾತಾವರಣವನ್ನು ಸೃಷ್ಠಿಸಿದೆ. ಕಾಡಿನಲ್ಲಿ ಆಹಾರವಿಲ್ಲದೆ ನಾಡಿನತ್ತ ಹುಲಿಗಳು ಹೆಜ್ಜೆಯಿಡುತ್ತಿವೆ. ಕಾಫಿ ತೋಟದ ಸಮೀಪವಿರುವ ಲೈನ್ ಮನೆಯ ಸಮೀಪ ಕಟ್ಟಿರುವ ಹಸುವಿನ ಮೇಲೆ ದಾಳಿ ನಡೆಸುತ್ತಿವೆ. ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ವ್ಯಾಘ್ರನ ಅಟ್ಟ ಹಾಸಕ್ಕೆ ರೈತರ ಹಸುಗಳು ಬಲಿಯಾಗುತ್ತಿವೆ.

ಮಂಗಳವಾರ ತಿತಿಮತಿಯ ರವಿ ಎಂಬವರಿಗೆ ಸೇರಿದ್ದ ಹಸುವಿನ ಮೇಲೆ ದಾಳಿ ನಡೆಸಿದ್ದ ಹುಲಿರಾಯ ಬುಧವಾರ ಮುಂಜಾನೆ ವೇಳೆಯಲ್ಲಿ ತಿತಿಮತಿ ನೊಖ್ಯ ಗ್ರಾಮದ ಕರಡಿಕೊಪ್ಪಲಿನ ರೈತ ಮಹಿಳೆ ಚಿತ್ರ ಎಂಬವರಿಗೆ ಸೇರಿದ ಹಸುವಿನ ಮೇಲೆ ದಾಳಿ ನಡೆಸಿದೆ.

ಇದರಿಂದ ಸಾರ್ವಜನಿಕರು, ಕಾರ್ಮಿಕರು, ವಿದ್ಯಾರ್ಥಿಗಳು ಗಾಬರಿಗೊಂಡಿದ್ದು ತೋಟದ ರಸ್ತೆಯಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹುಲಿ ಸೆರೆಗೆ ಕೂಬಿಂಗ್ ನಡೆಸುತ್ತಿದ್ದು ಮತ್ತಿಗೋಡುವಿನಲ್ಲಿರುವ ಸಾಕಾನೆ ಕೃಷ್ಣನ ಸಹಕಾರ ಪಡೆದಿದ್ದಾರೆ. 10ಕ್ಕೂ ಹೆಚ್ಚಿನ ಸಿಬ್ಬಂದಿಗಳು ತೋಟದಲ್ಲಿ, ಕಾಡಿನಲ್ಲಿ ಆನೆಯ ಸಹಾಯದಿಂದ ಕೂಬಿಂಗ್ ನಡೆಸುತ್ತಿದ್ದಾರೆ.

ಹುಲಿ ಸಮೀಪದ ದಟ್ಟಾರಣ್ಯದಲ್ಲಿ ಇರುವ ಬಗ್ಗೆ ಮಾಹಿತಿ ದೊರಕಿದ್ದು ಇಂದು ಸಂಜೆ ಹಸುವನ್ನು ಕೊಂದಿರುವ ಸ್ಥಳಕ್ಕೆ ಹುಲಿ ಆಗಮಿಸುವ ಸಂಶಯವಿದ್ದು ಈ ಭಾಗದಲ್ಲಿ ಅರಣ್ಯ ಸಿಬ್ಬಂದಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಹುಲಿ ಸೆರೆಗೆ ಬೋನ್ ಇಡುವ ಕಾರ್ಯದಲ್ಲಿ ಸಿಬ್ಬಂದಿಗಳು ಕಾರ್ಯ ಪ್ರವೃತರಾಗಿದ್ದಾರೆ.ಹಾಲಿನಿಂದ ಜೀವನ

ಜೀವನೋಪಾಯಕ್ಕಾಗಿ ಹಸು ಸಾಕಾಣೆ ನಡೆಸುತ್ತಿದ್ದೇವೆ. ಜೆರ್ಸಿ ಹಸು ಸಾಕಷ್ಟು ಹಾಲು ನೀಡುತ್ತಿದೆ ಇದರಿಂದ ಸಂಸಾರ ಸಾಗುತ್ತಿದೆ. ತಿಂಗಳ ಹಿಂದೆ ಕರುವೊಂದನ್ನು ಹುಲಿ ಹಿಡಿದಿತ್ತು ಆದರೆ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.ಇದೀಗ ಜೆರ್ಸಿ ಹಸುವನ್ನು ಹುಲಿ ತಿಂದು ಹಾಕಿದೆ. ಇಲ್ಲಿಯ ತನಕ ಪರಿಹಾರ ಲಭ್ಯವಾಗಿಲ್ಲ. ಹುಲಿ ಹಿಡಿಯಲು ಬೋನು ಹಿಡುವದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕೂಡಲೇ ಇಲಾಖೆ ಪರಿಹಾರ ವಿತರಿಸಬೇಕು ಎಂದು ಹಸು ಕಳೆದುಕೊಂಡ ಮಹಿಳೆ ಒತ್ತಾಯಿಸಿದ್ದಾರೆ.

ಜನ ಸಂಚಾರ ಪ್ರದೇಶದಲ್ಲಿ ಇದೀಗ ಹುಲಿ ಹಾವಳಿಯಿಂದ ನಡೆದಾಡುವದೇ ಕಷ್ಟವಾಗಿದೆ. ಯಾವ ತೋಟದಲ್ಲಿ ಹುಲಿ ಅಡಗಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ರಸ್ತೆಯಲ್ಲಿ ಸಂಚರಿಸುವದು ಕಷ್ಟವಾಗಿದೆ. ಕೂಡಲೇ ಹಸು ಕಳೆದುಕೊಂಡವರಿಗೆ ಇಲಾಖೆ ಪರಿಹಾರ ನೀಡಬೇಕು. ಹುಲಿ ಹಿಡಿಯಲು ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು.

- ಮಂಜುನಾಥ್, ಗ್ರಾಮಸ್ಥರು