ಮಡಿಕೇರಿ, ಮಾ. 6: ಹದಿನೈದು ವರ್ಷಗಳಿಗಿಂತಲೂ ಹಳೆಯದಾದ ಬಸ್‍ಗಳೂ ಸೇರಿದಂತೆ ಪ್ರಯಾಣಿಕ ವಾಹನಗಳ ಸಂಚಾರ ನಿಷೇಧಿಸುವದು ಸೇರಿದಂತೆ ಪ್ರಯಾಣಿಕ ಹಾಗೂ ಗೂಡ್ಸ್ ವಾಹನಗಳಿಗೆ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್‍ಗಳನ್ನು ಅಳವಡಿಸುವ ಸಂಬಂಧ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಬಹುತೇಕ ಹಳೆಯದಾದ ಪ್ರಯಾಣಿಕ ವಾಹನಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದ್ದು, ಮಾಲೀಕರುಗಳಿಗೆ ವಾಹನಗಳನ್ನು ಮಾರಾಟ ಮಾಡುವದೋ ಅಥವಾ ಏನು ಮಾಡುವದೆಂಬ ಸಂಕಟ ಪರಿಸ್ಥಿತಿ ಬಂದೊದಗಿದೆ. ಪ್ರಯಾಣಿಕ ವಾಹನಗಳಿಗೆ ರಹದಾರಿ ನೀಡುವ ಸಂದರ್ಭದಲ್ಲಿ ವಾಹನಗಳ ವಯೋಮಿತಿ ಪರಿಗಣಿಸಿ ನೀಡುವ ಸಂಬಂಧ ರಾಜ್ಯ ಸಾರಿಗೆ ಇಲಾಖೆಯಿಂದ ಸುತ್ತೋಲೆ ಹೊರಬಿದ್ದಿದೆ.ತೀರ್ಪಿನ ಹಿನ್ನೆಲೆ: ಯೂನಿಯನ್ ಆಫ್ ಇಂಡಿಯಾದ ಎ.ಸಿ ಮೆಹ್ತಾ ಹಾಗೂ ಇತರರ ರಿಟ್ ಅರ್ಜಿ (ಸಿವಿಲ್ 13029/1996) ಪ್ರಕರಣದಲ್ಲಿ 28.07.1998ರಲ್ಲಿ ಕೇಂದ್ರ ಮೋಟಾರು ವಾಹನ ನಿಯಮಾವಳಿಗಳ ನಿಯಮ 115ರ ಅಡಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು 15 ವರ್ಷಗಳಿಗೆ ಮೀರಿದ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ ನೀಡಿತ್ತು. ಅದರನ್ವಯ ರಾಜ್ಯ ಸಾರಿಗೆ ಪ್ರಾಧಿಕಾರವು ವಾಹನಗಳಿಗೆ ವಯೋಮಿತಿಯನ್ನು ನಿಗದಿಗೊಳಿಸಿ ತಾ. 1.1.1999ರಲ್ಲಿಯೇ ಸುತ್ತೋಲೆ ಹೊರಡಿಸಿದೆ.
ಮತ್ತೊಂದು ಸುತ್ತೋಲೆ: ನ್ಯಾಯಾಲಯದ ಆದೇಶ ಹಾಗೂ ಸಾರಿಗೆ ಪ್ರಾಧಿಕಾರದ ಹಿಂದಿನ ಸುತ್ತೋಲೆಯನ್ನು ಮುಂದಿಟ್ಟುಕೊಂಡು ಅಪಘಾತಗಳನ್ನು ತಪ್ಪಿಸಲು ಮತ್ತು ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ವಾಹನಗಳ ವಯೋಮಿತಿಯನ್ನು ಪರಿಗಣಿಸಿ ರಹದಾರಿ ನೀಡುವ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಮತ್ತು ರಾಜ್ಯದ ಎಲ್ಲ ಪ್ರಾದೇಶಿಕ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.
ಷರತ್ತುಗಳು: ರಾಜ್ಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳ ಪ್ರಯಾಣಿಕ ವಾಹನಗಳಿಗೆ, ವಿಶೇಷವಾಗಿ ಸಾರ್ವಜನಿಕರು ಹೆಚ್ಚು ಪ್ರಯಾಣ ಮಾಡುವ ಮಜಲು ವಾಹನಗಳು ಮತ್ತು ಒಪ್ಪಂದ ವಾಹನಗಳಿಗೆ ವಾಹನದ ಮೂಲ ನೋಂದಣಿ ದಿನಾಂಕದಿಂದ 15 ವರ್ಷದೊಳಗೆ ವಯೋಮಿತಿಯನ್ನು ವಿಧಿಸಿ ರಹದಾರಿ ನೀಡಬೇಕು.
ಈಗಾಗಲೇ ರಹದಾರಿ ನೀಡಿರುವ ವಾಹನಗಳಿಗೆ ರಹದಾರಿ ನವೀಕರಣ ಸಂದರ್ಭದಲ್ಲಿ ‘ಖಿhis ಠಿeಡಿmiಣ shಚಿಟಟ be ಜeemeಜ ಣo be iಟಿvಚಿಟiಜ uಟಿಟess ಣhe vehiಛಿಟe is ಡಿeಠಿಟಚಿಛಿeಜ bಥಿ ಟಚಿಣeಡಿ moಜeಟ vehiಛಿಟe’ ಎಂಬ ಷರತ್ತನ್ನು ವಿಧಿಸಬೇಕು. ವಾಹನದ ವಯೋಮಿತಿ ಮುಗಿದಿದ್ದರೆ 15 ವರ್ಷದ ಒಳಗಿನ ವಾಹನವನ್ನು ಬದಲಾಯಿಸದ ಹೊರತು ನವೀಕರಣ ಮಾಡಲು ಸಾಧ್ಯವಿಲ್ಲವೆಂದು ತಿರಸ್ಕರಿಸುವಂತೆ ಸಾರಿಗೆ ಇಲಾಖೆ ಉಪಕಾರ್ಯದರ್ಶಿ ಕೆ. ಬೀರೇಶ್ ಅವರು ತಾ. 14.2.2019 ರಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಸಾರಿಗೆ ಆಯುಕ್ತರ ಕಚೇರಿಯಿಂದ ಎಲ್ಲ ಸಾರಿಗೆ ಪ್ರಾಧಿಕಾರಿಗಳಿಗೆ ರವಾನೆಯಾಗಿದೆ.
40 ಬಸ್‍ಗಳಿಗೆ ನೋಟೀಸ್
ಸರಕಾರದ ಸುತ್ತೋಲೆಯನ್ನು ಮಡಿಕೇರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‍ಟಿಓ) ವತಿಯಿಂದ ಈಗಾಗಲೇ ಪಾಲಿಸಲಾಗುತ್ತಿದೆ. ಪ್ರಯಾಣಿಕರನ್ನು ಸಾಗಿಸುವ 15 ವರ್ಷಗಳಿಗೂ ಹಳೆಯ ವಾಹನಗಳ ಪರವಾನಗಿ ಹಾಗೂ ಸಾಮರ್ಥ ದೃಢೀಕರಣ (ಎಫ್.ಸಿ.) ನವೀಕರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ 40 ಹಳೆಯ ಬಸ್ ಮಾಲೀಕರಿಗೆ ಈ ಸಂಬಂಧ ನೋಟೀಸ್ ನೀಡಲಾಗಿದ್ದು, ಒಂದು ವೇಳೆ ಪರವಾನಗಿ ನವೀಕರಿಸ ಬೇಕಿದ್ದಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಮಾರ್ಗಕ್ಕೆ ಹಳೆಯ ಬಸ್‍ಗಳ ಬದಲಿಗೆ ಹೊಸ ಬಸ್‍ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ನೋಟೀಸ್‍ನಲ್ಲಿ ತಿಳಿಯಪಡಿಸಲಾಗಿದೆ.
ಸದ್ಯದ ಮಟ್ಟಿಗೆ ಬಸ್‍ಗಳಿಗೆ ನೋಟೀಸ್ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಕ್ಯಾಬ್‍ಗಳು, ಟ್ಯಾಕ್ಸಿ ಸೇರಿದಂತೆ ಎಲ್ಲ ವಾಹನಗಳ ಮೇಲೂ ಕ್ರಮಕೈಗೊಳ್ಳಲಾಗುವದೆಂದು ತಿಳಿದು ಬಂದಿದೆ.
ಅಲ್ಪ ವಿನಾಯ್ತಿ: ಪ್ರಸ್ತುತ ಶಾಲಾ-ಕಾಲೇಜು ಮಕ್ಕಳ ಪರೀಕ್ಷಾ ದಿನಗಳಾಗಿರುವದರಿಂದ ದಿಢೀರನೇ ಯಾವದೇ ವಾಹನಗಳ ಮೇಲೆ ಕ್ರಮಕೈಗೊಳ್ಳದೆ ಆರ್‍ಟಿಓ ಅಧಿಕಾರಿಗಳು ಅಲ್ಪ ವಿನಾಯ್ತಿ ನೀಡಿದ್ದಾರೆ. ಬಹುಶಃ ಪರೀಕ್ಷೆಗಳು ಮುಗಿದ ಬಳಿಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಮಾಲೀಕರ ಸಂಕಷ್ಟ
ಇತ್ತ ಸರಕಾರದ ಸುತ್ತೋಲೆ ಬಂದ ಬಳಿಕ ಹಳೆಯ ವಾಹನಗಳನ್ನಿಟ್ಟು ಕೊಂಡಿರುವ ಮಾಲೀಕರುಗಳಿಗೆ ಸಂಕಷ್ಟ ಎದುರಾಗಿದೆ. ವಾಹನಗಳನ್ನು ಮಾರಾಟ ಮಾಡುವದೋ ಅಥವಾ ಇರಿಸಿಕೊಳ್ಳುವದೋ ಎಂಬ ಚಿಂತೆ. ಮಾರಾಟ ಮಾಡುವದಾದರೆ ಕೊಳ್ಳುವವರಾರು...? ಎಷ್ಟು ಮೊತ್ತ ಸಿಗಬಹುದೋ? ಮಾರಾಟ ಮಾಡದಿದ್ದರೆ ಗುಜರಿಗೆ ನೀಡಬೇಕಷ್ಟೇ.. ಅಲ್ಲಿ ಎಷ್ಟು ಸಿಕ್ಕಿಯಾತು ಎಂಬ ಚಿಂತೆ ಮತ್ತೊಂದೆಡೆಯಾಗಿದೆ.
ನ್ಯಾಯಾಲಯದ ಮೊರೆ
ಸುತ್ತೋಲೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೊಡಗು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ಈ ರೀತಿಯ ಕಾನೂನು ಮೋಟಾರು ವಾಹನ ಕಾಯ್ದೆಯಲ್ಲಿಲ್ಲ. ಈಗಾಗಲೇ ಎಫ್‍ಸಿ ಮಾಡಿಸಿರುವ ಕೆಲವು ಬಸ್ ಮಾಲೀಕರು ಎಫ್‍ಸಿ ಸಮಯಾವಕಾಶ ಕಡಿಮೆ ನೀಡಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎಲ್ಲ ಮಾಲೀಕರುಗಳು ಸೇರಿ ನ್ಯಾಯಾಲಯದ ಮೊರೆ ಹೋಗಲಿದ್ದೇವೆ. ದಿಢೀರಾಗಿ ಏನೂ ಮಾಡಲಾಗದು. ಸಮಯಾವಕಾಶ ಬೇಕಾಗುತ್ತದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಕೋರಲಾಗುವದೆಂದು ತಿಳಿಸಿದ್ದಾರೆ.
ಪ್ಯಾನಿಕ್ ಬಟನ್-ಜಿಪಿಎಸ್
ಇದರೊಂದಿಗೆ ಪ್ರಯಾಣಿಕರ ಹಾಗೂ ಸರಕು ಸಾಗಾಟ ಮಾಡುವ ವಾಹನಗಳ ಮೇಲೆ ನಿಗಾ ವಹಿಸುವ ಸಲುವಾಗಿ ‘ಪ್ಯಾನಿಕ್ ಬಟನ್’ ಹಾಗೂ ‘ಜಿಪಿಎಸ್’ ಅಳವಡಿಕೆ ಕಡ್ಡಾಯ ಎಂಬ ನಿಯಮ ಕೂಡ ಜಾರಿಗೆ ಬಂದಿದೆ. ಕಳೆದ ಜನವರಿ 1 ರಿಂದಲೇ ಈ ಆದೇಶ ಜಾರಿಗೆ ಬಂದಿದೆಯಾದರೂ ಸಾರಿಗೆ ಸಂಸ್ಥೆಗಳು ಹಾಗೂ ಸಂಘಟನೆಗಳ
(ಮೊದಲ ಪುಟದಿಂದ) ಮನವಿ ಮೇರೆಗೆ ಮುಂದೂಡಲಾಗಿದೆ. ಸಾರಿಗೆ ಇಲಾಖೆಯ ಆದೇಶದಂತೆ ಪ್ರಯಾಣಿಕರನ್ನು ಸಾಗಿಸುವ ಬಸ್, ಕ್ಯಾಬ್, ಟ್ಯಾಕ್ಸಿಗಳು ಸೇರಿದಂತೆ ಗೂಡ್ಸ್ ಸಾಗಾಟ ಮಾಡುವ ಎಲ್ಲ ವಾಹನಗಳಿಗೂ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಅಳವಡಿಸುವದು ಕಡ್ಡಾಯವಾಗಿದೆ.
ಇದರಿಂದಾಗಿ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದರೆ, ಅವಘಡ ಸಂಭವಿಸಿದರೆ, ಅಪಹರಣ ಮುಂತಾದ ಘಟನೆಗಳು ಸಂಭವಿಸಿದರೆ ಪತ್ತೆ ಹಚ್ಚಲು ಸುಲಭವಾಗುತ್ತದೆ. ಈ ತಂತ್ರಾಂಶಗಳನ್ನು ಅಳವಡಿಸಿರುವ ವಾಹನಗಳು ಹಾಗೂ ಪೊಲೀಸ್ ಕಂಟ್ರೋಲ್ ರೂಂಗಳಿಗೆ ಸಂಪರ್ಕವಿರಲಿದ್ದು, ಸಿಗ್ನಲ್ ಮೂಲಕ ತಿಳಿಯಲ್ಪಡುತ್ತದೆ. ತುರ್ತು ಸಂದರ್ಭಗಳಲ್ಲಿ ಪ್ಯಾನಿಕ್ ಬಟನ್ ಅದುಮಿದರೆ ಪ್ರಸ್ತುತ ವಾಹನ ಯಾವ ಪ್ರದೇಶದಲ್ಲಿದೆ ಎಂಬದು ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಹಳೆಯ ವಾಹನಗಳಿಗೆ...
2019 ಜನವರಿಗಿಂತ ಹಿಂದಿನ ವಾಹನಗಳಿಗೆ ಈ ಎರಡು ತಂತ್ರಾಂಶ ಅಳವಡಿಕೆ ಕಡ್ಡಾಯವಾಗಿರುತ್ತದೆ. ಇತ್ತೀಚೆಗೆ ತಯಾರಾಗುತ್ತಿರುವ ಹೊಸ ವಾಹನಗಳಲ್ಲಿ ಈ ತಂತ್ರಾಂಶಗಳು ಅಡಕವಾಗಿಯೇ ತಯಾರಾಗಿರುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುವಂತೆ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಇವುಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಅಳವಡಿಕೆಯಾಗದ ವಾಹನಗಳ ಪರವಾನಗಿ ಎಫ್.ಸಿ. ನವೀಕರಣ ಮಾಡಲಾಗುವದಿಲ್ಲ ಎಂದು ಹೇಳುತ್ತಾರೆ.
ಪ್ರಯಾಣಿಕರನ್ನು ಸಾಗಿಸುವ ಆಟೋರಿಕ್ಷಾಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಮುಂದೂಡಿಕೆ: ಕಳೆದ ಜನವರಿಯಿಂದಲೇ ದಿಢೀರಾಗಿ ಈ ಸುತ್ತೋಲೆ ಬಂದಿದ್ದು, ಇದರಿಂದ ವಾಹನ ಮಾಲೀಕರು ಆತಂಕಕ್ಕೊಳಗಾಗಿದ್ದರು. ಅಲ್ಲದೆ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್‍ಗಳನ್ನು ಅಳವಡಿಸುವ ಕುರಿತು ವಾಹನಗಳ ಮೇಲೆ ನಿಗಾ ಇಡಲು ಬೇಕಾದಂತಹ ನಿಯಂತ್ರಣ ಕೊಠಡಿ ಸಾರಿಗೆ ಇಲಾಖೆಯಲ್ಲಿ ಇನ್ನು ಕೂಡ ಸ್ಥಾಪಿಸದೇ ಇರುವದರಿಂದ ಹಾಗೂ ಇನ್ನಿತರ ಕಾನೂನಾತ್ಮಕ ಅಂಶಗಳ ಕುರಿತು ಸಿದ್ಧತೆ ಮಾಡಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ಹಾಗೂ ಸಂಘಟನೆಗಳು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯಕ್ಕೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಸಾರಿಗೆ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಆಯುಕ್ತರು ಮುಂದಿನ 6 ತಿಂಗಳು ಅಥವಾ ಕೇಂದ್ರ ಸರಕಾರದಿಂದ ನಿರ್ದೇಶನ ಬಂದ ಕೂಡಲೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯ ದಿನಾಂಕವನ್ನು ಮುಂದೂಡಿ ಮತ್ತೊಂದು ಸುತ್ತೋಲೆ ಹೊರಡಿಸಿದ್ದಾರೆ. ಹಾಗಾಗಿ ಸದ್ಯದ ಮಟ್ಟಿಗೆ ವಾಹನ ಮಾಲೀಕರು ಸ್ವಲ್ಪ ನಿರಾಳರಾದಂತಾಗಿದ್ದು, ಆದರೂ ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವದು ಕಡ್ಡಾಯವಾಗಲಿದೆ.