ಮಡಿಕೇರಿ, ಮಾ. 5: ಕೈಲಾಸವಾಸಿ ಶಿವನನ್ನು ಆರಾಧಿಸುವ ಶಿವರಾತ್ರಿ ಉತ್ಸವವನ್ನು ನಾಡಿನಾದ್ಯಂತ ಆಸ್ತಿಕರು ಶ್ರದ್ಧಾ- ಭಕ್ತಿ, ಸಡಗರದಿಂದ ಆಚರಿಸಿದರು. ಶಿವ ದೇವಾಲಯಗಳೂ ಸೇರಿದಂತೆ ಇತರ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ಪುನಸ್ಕಾರಗಳೊಂದಿಗೆ ಸಾರ್ವಜನಿಕವಾಗಿಯೂ ಕಾರ್ಯಕ್ರಮಗಳನ್ನು ಏರ್ಪಡಿಸಿ ಶಿವನಾಮ ಸ್ಮರಣೆ ಮಾಡಿದರು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಶಿವರಾತ್ರಿ ಆಚರಣೆಗೆ ಸಹಸ್ರಾರು ಮಂದಿ ಸಾಕ್ಷೀಭೂತರಾದರು. ದೇವಾಲಯಗಳಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಹೋಮ - ಹವನಾದಿ ಕಾರ್ಯಗಳು ನೆರವೇರಿದವು. ನಗರದ ಐತಿಹಾಸಿಕ ಹಿನ್ನೆಲೆಯುಳ್ಳ ಓಂಕಾರೇಶ್ವರ ದೇವಾಲಯದಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇಗುಲದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರಹೋಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಪುರೋಹಿತ ನಾರಾಯಣ ಭಟ್ ಹಾಗೂ ಶ್ರೀಪತಿ ಭಟ್ ಅವರುಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ರಾತ್ರಿ ಕೂಡ ಪೂಜಾ ಕಾರ್ಯಕ್ರಮಗಳು ನೆರವೇರಿತು.

ಇಲ್ಲಿನ ದಾಸವಾಳದಲ್ಲಿರುವ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. 22 ಅಡಿ ಎತ್ತರದ ಮುನೇಶ್ವರನಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಉತ್ಸವದ ಅಂಗವಾಗಿ ಉತ್ಸವ ಮೂರ್ತಿಯೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಹೊರ ವಲಯದ ಕರ್ಣಂಗೇರಿಯಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲೂ ವಿಶೇಷ ಪೂಜೆಯೊಂದಿಗೆ ಬೃಹತ್ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದಲ್ಲಿರುವ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ವಿಜಯ ವಿನಾಯಕ, ಚೌಡೇಶ್ವರಿ ಸೇರಿದಂತೆ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.

ಮೇಕೇರಿ ಗೌರಿಶಂಕರ

ಮೂರ್ನಾಡು ರಸ್ತೆಯಲ್ಲಿರುವ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಆಸುಪಾಸಿನ ಗ್ರಾಮಗಳ ಮಹಿಳೆಯರು ಮೆರವಣಿಗೆಯಲ್ಲಿ ಹೊತ್ತು ತಂದ ಹೊರೆ ಕಾಣಿಕೆಯನ್ನು ಸಮರ್ಪಣೆ ಮಾಡಲಾಯಿತು. ವಿಶೇಷ ಪೂಜೆಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗರಣೆಯೊಂದಿಗೆ ಶಿವರಾತ್ರಿ ಆಚರಿಸಲಾಯಿತು. ಕಡಗದಾಳುವಿನ ಪ್ರಕೃತಿದತ್ತ ಶ್ರೀ ಬೊಟ್ಲಪ್ಪೇಶ್ವರ ದೇಗುಲದಲ್ಲಿ ಶಿವರಾತ್ರಿ ಆಚರಿಸಲಾಯಿತು.

ಸೋಮವಾರಪೇಟೆಯಲ್ಲಿ ಸ್ಮರಣೆ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸೋಮವಾರಪೇಟೆಯ ಗ್ರಾಮೀಣ ಭಾಗಗಳಲ್ಲಿ ಶ್ರದ್ಧಾಭಕ್ತಿಯಿಂದ ಶಿವನಾಮ ಸ್ಮರಣೆ ನಡೆಯಿತು. ಶಿವರಾತ್ರಿಯ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಪೂಜೆ ನಡೆಯಿತು. 121 ಕಳಸಗಳನ್ನಿಟ್ಟು ರುದ್ರಪಾರಾಯಣ ಪೂಜೆ ನಡೆಸಲಾಯಿತು. ಸಂಜೆ 6 ಗಂಟೆಯಿಂದ ವಿಶೇಷ ಪೂಜೆ ನಡೆಯಿತು. ನಂತರ ಮೈಸೂರಿನ ವೆಂಕಟೇಶ್ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವತಿಯರು ತಮ್ಮ ಇಷ್ಟಾರ್ಥಗಳ ನೆರವೇರಿಕೆಗಾಗಿ ಸೋಮೇಶ್ವರ ದೇವಾಲಯದ ಶಿವನ ಮೂರ್ತಿಯ ಮುಂಭಾಗದಲ್ಲಿರುವ ಬಸವ ಮೂರ್ತಿಯಲ್ಲಿ ನಿವೇದಿಸಿಕೊಂಡರು.

ಸಮೀಪದ ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಸುತ್ತಲಿನ ಗ್ರಾಮಸ್ಥರು ಸೇರಿ ಪೂಜೆ ಸಲ್ಲಿಸಿ, ಬಳಿಕ ಮಾಲಂಬಿ ಬೆಟ್ಟದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯಕ್ಕೆ ತೆರಳಿ ಗ್ರಾಮದ ಸಮೃದ್ಧಿ ಹಾಗೂ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ರಾತ್ರಿ ದೇವಾಲಯದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ, ಭಜನೆ ಹಾಗು ಯಕ್ಷಗಾನ ಬಯಲಾಟ ನಡೆಯಿತು.

ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯ, ತಾಕೇರಿ ಹಾಗು ಬಿಳಿಗೇರಿ ಗ್ರಾಮದ ಉಮಾ ಮಹೇಶ್ವರ, ಕಿರಗಂದೂರು ಶ್ರೀ ಈಶ್ವರ ದೇವಾಲಯ, ಅರಿಸಿನಗುಪ್ಪೆ ಮಂಜುನಾಥ ದೇವಾಲಯ, ತಣ್ಣೀರುಹಳ್ಳದ ಬಸವೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಕಾರ್ಯಕ್ರಮಗಳು ನಡೆಯಿತು.

ಹಿರಿಕರ ಮಲ್ಲೇಶ್ವರ ದೇವಾಲಯ, ಕೂಗೂರಿನ ಪಂಚಲಿಂಗೇಶ್ವರ ದೇವಾಲಯ, ಬಸವನಕೊಪ್ಪದ ಬಸವೇಶ್ವರ ದೇವಾಲಯ, ಸೋಮವಾರಪೇಟೆಯ ಬಸವೇಶ್ವರ, ಕಟ್ಟೆ ಬಸವೇಶ್ವರ, ಮಹಾಗಣಪತಿ, ಶ್ರೀ ಮುತ್ತಪ್ಪ-ಅಯ್ಯಪ್ಪ ದೇವಾಲಯಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.

ಅರಿಶಿನಗುಪ್ಪೆ ಮಂಜುನಾಥ ದೇವಾಲಯದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ತೈಲಾಭಿಷೇಕ, ಕ್ಷೀರಾಭಿಷೇಕ, ದ್ವಿತೀಯ ಪೂಜೆ ಮತ್ತು ಕಬ್ಬಿನ ಹಾಲಿನ ಅಭಿಷೇಕ, ತೃತೀಯಯಾಮ ಮತ್ತು ಎಳನೀರು ಅಭಿಷೇಕ ನಡೆಯಿತು.

ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಶಿವರಾತ್ರಿ ಉತ್ಸವ ಆಚರಿಸಲಾಯಿತು. ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಕೇಂದ್ರದ ಮುಖ್ಯಸ್ಥೆ ಬಿ.ಕೆ. ದಾಕ್ಷಾಯಿಣಿ, ಬಿ.ಕೆ. ಶಾಲಿನಿ, ಎಂ.ಸಿ. ಮುದ್ದಪ್ಪ, ಸುಲೋಚನಾ ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕುಶಾಲನಗರದಲ್ಲಿ ಆಚರಣೆ

ಕುಶಾಲನಗರ: ಮಹಾಶಿವರಾತ್ರಿ ಅಂಗವಾಗಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಗ್ರಾಮಗಳ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕುಶಾಲನಗರ ಪಟ್ಟಣದ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತಿತರ ಪೂಜಾ ವಿಧಿವಿಧಾನಗಳು ಜರುಗಿದವು. ಅತ್ತೂರು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವ ಪ್ರಯುಕ್ತ ಎರಡು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ದೇವಾಲಯಕ್ಕೆ ತಂತ್ರಿಗಳ ಆಗಮನ ನಂತರ ತಕ್ಕರ ಮನೆಯಿಂದ ಶ್ರೀ ಕ್ಷೇತ್ರ ಭಂಡಾರವನ್ನು ತರಲಾಯಿತು. ನಂತರ ದೇವರಿಗೆ ಮಹಾಪೂಜೆ ಸೋಮವಾರದಂದು ಬೆಳಗ್ಗೆ ಗಣಪತಿ ಹೋಮ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಹುದಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ನಂತರ ಸಂಜೆ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 17ನೇ ವಾರ್ಷಿಕ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಬಿ.ಪಿ.ಗಣಪತಿ, ಖಜಾಂಚಿ ಕೆ.ಆರ್.ಸುಬ್ರಮಣಿ, ಟಿ.ಕೆ.ಸುಬ್ಬಯ್ಯ ಮತ್ತಿತರರು ಇದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಕುಶಾಲನಗರ ಮಹಾಶಿವರಾತ್ರಿ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಕಾರು ನಿಲ್ದಾಣದಲ್ಲಿ ಸಂಜೆ ದೇವರಿಗೆ ಜಲಾಭಿಷೇಕ, ಬಿಲ್ವಾರ್ಚನೆ ನಂತರ ರಾಜ್ಯಮಟ್ಟದ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಸ್ಪರ್ಧಾ ಕಾರ್ಯಕ್ರಮವನ್ನು ಸ್ಥಳೀಯರೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಉದ್ಘಾಟಿಸಿದರು. ಈ ಸಂದರ್ಭ ಪ್ರಮುಖರಾದ ಎಸ್.ಕೆ.ಸತೀಶ್, ವಿ.ಎನ್.ವಸಂತಕುಮಾರ್, ಮಹಾಶಿವರಾತ್ರಿ ಆಚರಣಾ ಸಮಿತಿಯ ಕೆ.ಎಸ್.ನಾಗೇಶ್, ಕೆ.ಎನ್.ದೇವರಾಜ್, ಡಿ.ವಿ.ರಾಜೇಶ್, ಎಂ.ಕೆ.ದಿನೇಶ್ ಮತ್ತಿತರರು ಇದ್ದರು. ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಬಯಲು ಬಸವೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ 10ನೇ ವರ್ಷದ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಬಣ್ಣದ ರಂಗೋಲಿ ಸ್ಪರ್ಧೆ, ಛದ್ಮವೇಶ, ಭಕ್ತಿಗೀತೆ, ಜಾನಪದ ನೃತ್ಯ ಸೇರಿದಂತೆ ಹೊರಾಂಗಣ ಸ್ಪರ್ಧೆ ಜರುಗಿದವು.

ಮಳೆ ಮಲ್ಲೇಶ್ವರನಿಗೆ ಪೂಜೆ

ಆಲೂರು ಸಿದ್ದಾಪುರ, ಶನಿವಾರಸಂತೆ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆಮಲ್ಲೇಶ್ವರ ಬೆಟ್ಟದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಟ್ಟದ ಮೇಲಿರುವ ಶ್ರೀ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12-30 ರವರೆಗೆ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ, ಶ್ರೀ ಗಣಪತಿ ಮತ್ತು ಶ್ರೀ ಬಸವಣ್ಣ ದೇವರುಗಳಿಗೆ ವಿಶೇಷ ಹೂವಿನ ಅಭಿಷೇಕ, ಮಹಾ ಪೂಜೆ, ಮಹಾ ಮಂಗಳಾರತಿ ನಡೆಯಿತು.

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರ ಮುಂಜಾನೆ 6 ಗಂಟೆಯಿಂದ ಸಂಜೆ 4 ಗಂಟೆಯ ತನಕ ತಂಡೋಪತಂಡವಾಗಿ ಸಾವಿರಾರು ಭಕ್ತರು ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿ ಮಳೆ ಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ಥಳೀಯ ಭಕ್ತಾದಿಗಳು ಸೇರಿದಂತೆ ಪಕ್ಕದ ಹಾಸನ ಜಿಲ್ಲೆ ಮತ್ತು ಮೈಸೂರು ಜಿಲ್ಲೆಗಳಿಂದ 10 ಸಾವಿರಕ್ಕಿಂತಲೂ ಹೆಚ್ಚಿನ ಭಕ್ತಾದಿಗಳು ಮಳೆ ಮಲ್ಲೇಶ್ವರ ಬೆಟ್ಟವನ್ನೇರಿ ದೇವರಿಗೆ ಪೂಜೆ ಸಲ್ಲಿಸಿದರು. ದೇವಾಲಯ ಸಮಿತಿ ದಾನಿಗಳಿಂದ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ದೇವಾಲಯದ ಅರ್ಚಕ ಎಂ.ಎಸ್.ಚಂದ್ರಪ್ಪ ನೇತೃತ್ವದಲ್ಲಿ ಅರ್ಚಕರಾದ ನಂಜುಂಡಯ್ಯ, ನಂದ ಪೂಜಾ ವಿದಿ ವಿಧಾನ ನೆರವೇರಿಸಿದರು.

ಸೋಮವಾರಪೇಟೆ ಸಿಐ ನಂಜುಂಡೇಗೌಡ ಮತ್ತು ಶನಿವಾರಸಂತೆ ಎಸ್‍ಐ ತಿಮ್ಮಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ದೇವಾಲಯ ಸಮಿತಿ ಪ್ರಮುಖರಾದ ಎಚ್.ಪಿ.ದಿವಾಕರ್, ಎಚ್.ಕೆ.ಸದಾಶಿವ, ಎಚ್.ಕೆ.ಹಾಲಪ್ಪ, ಎಸ್.ಸಿ.ಶರತ್‍ಶೇಖರ್, ಎಸ್.ಎಂ.ಮಹಂತೇಶ್, ಎನ್.ಬಿ.ವಿರೂಪಾಕ್ಷ, ಎಚ್.ಆರ್.ಮುತ್ತಣ್ಣ, ಎಂ.ಇ.ವೆಂಕಟೇಶ್, ಎಂ.ಎಂ.ಮಲ್ಲೇಶ್ ಮುಂತಾದವರಿದ್ದರು.

ವೀರಾಜಪೇಟೆಯಲ್ಲಿ ಉತ್ಸವ

ವೀರಾಜಪೇಟೆ: ವೀರಾಜಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ಮಹೋತ್ಸವ ಸಂಭ್ರಮ ಸಡಗರದಿಂದ ಆಚರಿಸಿದರು. ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ತಾ:2ರಿಂದ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು ತಾ:3ರಂದು ತಳಿಗೆ ಪೂಜೆ, ಕಾವಲು ದೇವತೆಗಳ ಪೂಜೆ ನೆರವೇರಿತು.

ತಾ. 4ರಂದು ಭಾಗಮಂಡಲದ ತಲಕಾವೇರಿಯಿಂದ ಪವಿತ್ರ ತೀರ್ಥ ತಂದು ಪುರುಷರು, ಮುತ್ತೈದೆಯರು, ಹೆಣ್ಣು ಮಕ್ಕಳು ತೆಲುಗರ ಬೀದಿ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವರಿಗೆ ಅಭಿಷೇಕ ನಂತರ ವಿಶೇಷ ಮಹಾಪೂಜೆ ನಡೆಯಿತು. ರಾತ್ರಿ 9ಗಂಟೆಗೆ ಸಾಂಪ್ರದಾಯ ಬದ್ಧವಾದ ಪ್ರಥಮ ಕಾಲದ ಅಭಿಷೇಕ ಪೂಜೆ, ರಾತ್ರಿ 12ಗಂಟೆಗೆ ದ್ವಿತೀಯ ಕಾಲದ ಅಭಿಷೇಕ, ತಾ:5ರಂದು ಬೆಳಗಿನ ಜಾವ ತೃತೀಯ ಕಾಲದ ಅಭಿಷೇಕ ಪೂಜೆ, ಬೆಳಿಗ್ಗೆ 6ಗಂಟೆಗೆ ಚತುರ್ಥ ಕಾಲದ ಪೂಜೆ ಜರುಗಿತು. ಅಪರಾಹ್ನ ವಿಶೇಷ ಅಲಂಕಾರ ಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು.

ಮಲೆತಿರಿಕೆ ಬೆಟ್ಟದಲ್ಲಿರುವ ಪ್ರಾಚೀನ ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬೆಳಗಿನ 6ಗಂಟೆಯಿಂದಲೇ ಪುರುಷ ಭಕ್ತಾದಿಗಳು, ಮುತ್ತೈದೆಯರು, ಹೆಣ್ಣು ಮಕ್ಕಳು ಸರದಿ ಪ್ರಕಾರ ದೇವಾಲಯಕ್ಕೆ ಬಂದು ದೇವರಿಗೆ ಪೂಜಾ ಸೇವೆ ಸಲ್ಲಿಸಿ ದರ್ಶನ ಪಡೆಯುತ್ತಿದ್ದುದು ವಿಶೇಷ ಎನಿಸಿತ್ತು. ದೇವಾಲಯದಲ್ಲಿ ಈಶ್ವರನಿಗೆ ವಿಶೇಷ ಮಹಾ ಪೂಜಾ ಸೇವೆ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಮಲೆತಿರಿಕೆ ಬೆಟ್ಟದಲ್ಲಿರುವ ಶನೀಶ್ವರ ದೇವಾಲಯದಲ್ಲಿ ಹಾಗೂ ಮಗ್ಗುಲದ ಶನೀಶ್ವರ ದೇವಾಲಯದಲ್ಲಿಯೂ ಸಾಂಪ್ರದಾಯಿಕ ಪೂಜೆ ಅನ್ನ ಸಂತರ್ಪಣೆ ಜರುಗಿತು. ಗಡಿಯಾರಕಂಬದ ಬಳಿಯಿರುವ ಗಣಪತಿ ದೇವಾಲಯ, ಮುನೀಶ್ವರ ದೇವಾಲಯ, ಬಸವೇಶ್ವರ ದೇವಾಲಯ, ಛತ್ರಕೆರೆ ಹಾಗೂ ಅಯ್ಯಪ್ಪ ಸ್ವಾಮಿ ರಸ್ತೆಯಲ್ಲಿರುವ ಆಂಜನೇಯ ದೇವಾಲಯಗಳಲ್ಲಿ ಶಿವಕೇರಿಯ ಮಾರಿಯಮ್ಮ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ವಿಶೇಷ ಪೂಜೆಗಳು ಜರುಗಿದವು.

ವೀರಾಜಪೇಟೆ: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ದೇವರಿಗೆ ಅಭೀಷೇಕ ಪೂಜೆ ಶಾಂತಿಪೂಜೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ಶ್ರದ್ಧಾಭಕ್ತಿಯಿಂದ ನಡೆದವು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗದ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಶನೇಶ್ವರ ದೇವಾಲಯದ ಅಧ್ಯಕ್ಷ ಚೋಕಂಡ ರಮೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಪೇರೂರು ಇಗ್ಗುತ್ತಪ್ಪ

ನಾಪೋಕ್ಲು: ಶಿವರಾತ್ರಿ ಹಬ್ಬದ ಅಂಗವಾಗಿ ಪೇರೂರು ಗ್ರಾಮದ ಇಗ್ಗುತ್ತಪ್ಪ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಮೂರು ಇಗ್ಗುತ್ತಪ್ಪ ದೇವಾಲಯಗಳಲ್ಲಿ ಒಂದಾದ ಪೇರೂರು ಗ್ರಾಮದ ಬಲ್ಲತ್ತನಾಡು ಪೆರ್ಮೆ ಇಗ್ಗುತ್ತಪ್ಪ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಮಹಾಪೂಜೆ ಜರುಗಿತು. ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಭಕ್ತರಿಂದ ತುಲಾಭಾರ ಸೇವೆಗಳನ್ನು ನಡೆಸಲಾಯಿತು. ಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ಏರ್ಪಡಿಸಲಾಯಿತು. ಬಳಿಕ ಇಗ್ಗುತ್ತಪ್ಪ ದೇವರ ಉತ್ಸವ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ನೃತ್ಯಬಲಿ ವೀಕ್ಷಿಸಿದರು. ದೇವಾಲಯದ ಅರ್ಚಕ ಗಿರೀಶ್ ನೇತೃತ್ವದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (6ನೇ ಪುಟಕ್ಕೆ) ಸುಂಟಿಕೊಪ್ಪದಲ್ಲಿ ಶಿವರಾತ್ರಿ

(5ನೇ ಪುಟದಿಂದ) ಸುಂಟಿಕೊಪ್ಪ: ಮಹಾಶಿವರಾತ್ರಿಯ ಅಂಗವಾಗಿ ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಕಂಬಿಬಾಣೆಯ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಬಿಲ್ವಪತ್ರೆ ಪೂಜೆ, ದೀಪಾರಾಧನೆ ನಡೆದು ನಂತರ ಪ್ರಮುಖ ಅರ್ಚಕ ಪ್ರಭಾಕರ್ ಕುದ್ದಣ್ಣಯ್ಯ ಅವರ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.

ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ನೂರಾರು ಭಕ್ತರಿಗೆ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ್ ರೈ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಟಿಸಿಎಲ್ ಆನಂದ್, ಕೆ.ಎಸ್.ಭಟ್, ಪಳಂಗಪ್ಪ, ಅನಿಲ್ ಇತರರು ಇದ್ದರು.

ಬೈತೂರಪ್ಪ ದೇವಾಲಯ: ಸಮೀಪದ ಕೊಡಗರಹಳ್ಳಿ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ ಹಾಗೂ ಶಿವಾರಾಧನೆ ನಡೆಸಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಮೀಪದ ನಾಕೂರು ಶಿವ ದೇವಾಲಯ, ಕಂಬಿಬಾಣೆ ಮ್ಯಾಗಡೋರ್ ಶಿವ ದೇವಾಲಯ, ಹರದೂರು ಮಲ್ಲಿಕಾರ್ಜುನ ಕಾಲೋನಿಯ ಶಿವ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಶಿವಪೂಜೆ ಭಜನೆ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಎಲ್ಲಾ ದೇವಾಲಯಗಳಲ್ಲೂ ಭಕ್ತರಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ಅತ್ತೂರಿನಲ್ಲಿ ಮೊದಲ ಉತ್ಸವ

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ಕಳೆದ ವರ್ಷ ಪ್ರತಿಷ್ಠಾಪನೆಗೊಂಡ ನೂತನ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜಾಕಾರ್ಯಗಳು ನಡೆದವು. ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನಂತರ ಮನರಂಜನೆ ಕಾರ್ಯಕ್ರಮ ನಡೆಯಿತು. ಬೆಳಗ್ಗಿನಿಂದ ವಿವಿಭ ಹೋಮಗಳು, ಶ್ರೀದೇವರಬಲಿ, ಶಿವಪಂಚಾಕ್ಷರಿ, ಮುಂತಾದ ಪೂಜಾವಿಧಿ ವಿಧಾನಗಳು ನಡೆದವು. ಈ ಎರಡು ದಿನಗಳಲ್ಲಿ ಸಾವಿರಾರು ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಎರಡು ದಿನಗಳಲ್ಲಿಯೂ ನಿರಂತರ ಅನ್ನ ಸಂತರ್ಪಣಾ ಕಾರ್ಯ ನಡೆಯಿತು. ಎಲ್ಲಾ ಪೂಜಾ ಕಾರ್ಯದಲ್ಲಿಯೂ ದೇವಸ್ಥಾನದ ಸಮಿತಿಯ ಅಧ್ಯಕ್ಷ ಉಗ್ರಾಣಿ ಮನೋಜ್ ಮತ್ತು ಸರ್ವಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಶಿವರಾತ್ರಿ ಪೂಜಾ ಉತ್ಸವವನ್ನು ಸುಗಮವಾಗಿ ನಡೆಸಲು ಸಹಕರಿಸಿದರು. ಶ್ರೀ ಪಂಚಲಿಂಗೇಶ್ವರ ದೇವರ ಪ್ರಥಮ ಶಿವರಾತ್ರಿ ಮಹೋತ್ಸವ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸಾಮಾಜಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅರಣ್ಯದಂಚಿನಲ್ಲಿ ಕಳೆದ ವರ್ಷ ಬ್ರಹ್ಮಕಲಶೋತ್ಸವ ನಡೆದು ಇದು ಮೊದಲ ವರ್ಷದ ಶಿವರಾತ್ರಿ ಉತ್ಸವವಾಗಿದೆ.

ಹೊಸೂರುವಿನಲ್ಲಿ ಆಚರಣೆ

ಗೋಣಿಕೊಪ್ಪಲು: ಹೊಸೂರು ಶ್ರೀ ಮಹಾದೇವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಮತ್ತು ಮಹಾಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ಜರುಗಿತು. ಸೋಮವಾರ ಹಾಗೂ ಮಂಗಳವಾರ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶಿವನಿಗೆ ಪೂಜೆ ಸಲ್ಲಿಸಿದರು.

ಹೊಸೂರು, ಬೆಟ್ಟಕೇರಿ, ಕಳತ್ಮಾಡು ಗ್ರಾಮಗಳಲ್ಲದೆ ಸಮೀಪ ಗ್ರಾಮದ ನೂರಾರು ಭಕ್ತಾದಿಗಳು ಭಕ್ತಿ ಭಾವದೊಂದಿಗೆ ಶಿವರಾತ್ರಿ ಆಚರಣೆಯಲ್ಲಿ ತೊಡಗಿಸಿಕೊಂಡಿರುವದು ಕಂಡುಬಂತು. ತಾ.1 ರಿಂದ ತಾ.6( ಶುಕ್ರವಾರ)ರ ವರೆಗೆ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ಜರುಗಲಿದ್ದು, ಪ್ರತಿನಿತ್ಯ ಬೆಳಗ್ಗಿನ ಫಲಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಸಾಮೂಹಿಕ ಭೋಜನ ಏರ್ಪಡಿಸಿದ್ದು ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮೊಳ್ಳೇರ ಸುಭಾಶ್ ಭೀಮಯ್ಯ ಮತ್ತು ಕಾರ್ಯದರ್ಶಿ ರಮೇಶ್ ಭಟ್ ತಿಳಿಸಿದ್ದಾರೆ.

ತಾ.4 ರಂದು ಮಹಾಶಿವರಾತ್ರಿ ಅಂಗವಾಗಿ ರುದ್ರ ಪಾರಾಯಣ, ಸಂಕಲ್ಪ ಪೂಜೆ, ಪ್ರಾತಕಾಲ 9 ಸುತ್ತು ದೇವರ ನೃತ್ಯ ಬಲಿ, ಮಹಾಗಣಪತಿ ಹೋಮ, ಕಲಶ ಪೂಜೆ, ಮಹಾಪೂಜೆ ಹಾಗೂ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಿತು. ತಾ.6 ರಂದು( ಇಂದು) ವಾರ್ಷಿಕ ಮಹೋತ್ಸವದ ಅಂತಿಮ ದಿನವಾಗಿದ್ದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ನವಕಲಶ ಪೂಜೆ, ಅಭಿಶೇಕ, ಮಹಾಪೂಜೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮವಿದೆ. ಉದಯಕುಮಾರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ.

ಸಿದ್ದಾಪುರದಲ್ಲಿ ಶಿವರಾತ್ರಿ

ಸಿದ್ದಾಪುರ: ಸಿದ್ದಾಪುರ ಸಮೀಪದ ಹೈಸ್ಕೂಲ್ ರಸ್ತೆಯಲ್ಲಿರುವ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಉತ್ಸವದಲ್ಲಿ ವಿವಿಧ ಪೂಜಾ ಕೈ�